ಮದುವೆ ಸ್ವರ್ಗದಲ್ಲಿ ನಿಶ್ಚಯವಾಗುತ್ತದೆ ಅನ್ನೋ ಮಾತಿದೆ. ಆ ಮಾತಿಗೆ ತಕ್ಕಂತೆ ದೇವರ ಹುಬ್ಬಳ್ಳಿಯ ದೇವರಂತಹ ಜೋಡಿಗಳು ಸುಧೀರ್ಘ ಜೀವನ ನಡೆಸಿ, ಸಾವಿನಲ್ಲೂ ಒಂದಾಗಿದ್ದಾರೆ.
ಧಾರವಾಡ ಸಮೀಪದ ದೇವರ ಹುಬ್ಬಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದಾಂಪತ್ಯದಲ್ಲಿ ಅನ್ಯೋನ್ಯವಾಗಿದ್ದ ಹಿರಿಯ ಜೀವಗಳೆರಡು ಸಾವಿನಲ್ಲಿ ಒಂದಾಗಿವೆ.
ಧಾರವಾಡ ಸಮೀಪದ ದೇವರ ಹುಬ್ಬಳ್ಳಿ ಗ್ರಾಮದ ರೈತ ಕುಟುಂಬದ ದಂಪತಿಗಳಾದ 82 ವಯಸ್ಸಿನ ಈಶ್ವರ ಆರೇರ ಹಾಗೂ ಅವರ ಪತ್ನಿ 73 ವರ್ಷದ ಪಾರವ್ವಾ ಆರೇರ ಒಂದೇ ದಿನ ಸ್ವರ್ಗಸ್ಥರಾಗಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ಪಾರವ್ವ, ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಅವರು ಇಂದು ಬೆಳಗಿನ ಜಾವ ನಿಧನರಾಗಿದ್ದರು. ಪತ್ನಿಯ ಸಾವಿನ ಸುದ್ದಿ ತಿಳಿದ ಪತಿ ಈಶ್ವರ ಅವರು ಸಹ ಪ್ರಾಣ ಬಿಟ್ಟಿದ್ದಾರೆ.
ನಾಲ್ವರು ಪುತ್ರಿಯರು, 12 ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಹೊಂದಿದ್ದ ಈ ಜೋಡಿಗಳು, ಮಾದರಿ ಜೀವನ ನಡೆಸಿ, ಕೊನೆಯುಸಿರೆಳೆದಿದ್ದಾರೆ.
ನಿನ್ನೇ ರಾತ್ರಿ ಇಬ್ಬರು ಒಟ್ಟಿಗೆ ಊಟ ಮಾಡಿ ನಗು ನಗುತ್ತಲೇ ಇದ್ದ ಜೀವಗಳು, ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿವೆ.
ಸಾವಿನಲ್ಲಿ ಒಂದಾದ ದಂಪತಿಗಳನ್ನು ನೋಡಿ ಗ್ರಾಮಸ್ಥರ ಕಣ್ಣೀರು ಹರಿಸಿದ್ದಾರೆ. ಇಂದು ಸಂಜೆ ಇಬ್ಬರ ಅಂತ್ಯಸಂಸ್ಕಾರ ದೇವರಹುಬ್ಬಳ್ಳಿ ಗ್ರಾಮದಲ್ಲಿ ನಡೆಯಲಿದೆ.
ಅಗಲಿದ ಜೋಡಿಗಳಿಗೆ ಕರ್ನಾಟಕ ಫೈಲ್ಸ್ ಕಂಬನಿ ಮಿಡಿಯುತ್ತದೆ.
