ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದಕ್ಕೆ ಪರಿಹಾರ ಕಂಡುಕೊಳ್ಳಲು ಮಹಾರಾಷ್ಟ್ರ ಸರ್ಕಾರ ಇಬ್ಬರು ಸಚಿವರನ್ನು ನೋಡಲ್ ಸಚಿವರನ್ನಾಗಿ ನೇಮಿಸಿ ಅಧಿಕೃತ ಆದೇಶ ಹೊರಡಿಸಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಉಪಸ್ಥಿತಿಯಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಹಾರಾಷ್ಟ್ರ ಸಿ ಎಮ್ ಆಗಿದ್ದ ಏಕನಾಥ ಸಿಂಧೆ, ಗಡಿ ಸಮಸ್ಯೆಗೆ ನೋಡಲ್ ಸಚಿವರನ್ನು ನೇಮಕ ಮಾಡಲು ಒಪ್ಪಿಗೆ ಕೊಟ್ಟಿದ್ದರು.
ಅದರಂತೆ ಮಹಾರಾಷ್ಟ್ರ ಸರ್ಕಾರ ನಿರ್ಧಾರ ಪ್ರಕಟಿಸಿ, ಮಹಾರಾಷ್ಟ್ರ-ಕರ್ನಾಟಕ ಗಡಿ ಸಮಸ್ಯೆಗೆ ನೋಡಲ್ ಸಚಿವರನ್ನು ನೇಮಿಸಿದೆ.
ನೋಡಲ್ ಸಚಿವರಾಗಿ ಚಂದ್ರಕಾಂತ ಪಾಟೀಲ ಮತ್ತು ಶಂಭುರಾಜ್ ದೇಸಾಯಿ ಅವರಿಗೆ ಜವಾಬ್ದಾರಿ ವಹಿಸಲಾಗಿದೆ.
ಶುಕ್ರವಾರ, ಮಹಾರಾಷ್ಟ್ರ ಸರ್ಕಾರದ ಸಾಮಾನ್ಯ ಆಡಳಿತ ಇಲಾಖೆ ಈ ಸಂಬಂಧ ಸರ್ಕಾರಿ ಆದೇಶವನ್ನು ಹೊರಡಿಸಿದೆ.
ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ಪರಿಣಾಮಕಾರಿಯಾಗಿ ಮುಂದುವರಿಸಲು, ಅರ್ಜಿಯ ಕುರಿತು ಸರ್ಕಾರವನ್ನು ಪ್ರತಿನಿಧಿಸಲು ನೇಮಕಗೊಂಡಿರುವ ಹಿರಿಯ ವಕೀಲರು ಮತ್ತು ಗಡಿಯಲ್ಲಿನ ಮಹಾರಾಷ್ಟ್ರ ಏಕೀಕರಣ ಸಮಿತಿ ನಡುವೆ ಸಮನ್ವಯ ಸಾಧಿಸಲು ಸಚಿವರಾದ ಚಂದ್ರಕಾಂತ್ ಪಾಟೀಲ್ ಮತ್ತು ಶಂಭುರಾಜ್ ದೇಸಾಯಿ ಅವರನ್ನು ನೋಡಲ್ ಸಚಿವರನ್ನಾಗಿ ನೇಮಿಸಲಾಗಿದೆ.
ಇದೀಗ ಮತ್ತೊಮ್ಮೆ ಈ ಇಬ್ಬರು ಸಚಿವರು ಸಮನ್ವಯ ಸಚಿವರಾಗಿ ನೇಮಕಗೊಂಡಿದ್ದಾರೆ. ರಾಜ್ಯ ಸರ್ಕಾರ 2015 ರಿಂದ ಗಡಿ ವಿವಾದ ಸಮಸ್ಯೆಗೆ ಸಮನ್ವಯ ಸಚಿವರನ್ನು ನೇಮಿಸಲು ಆರಂಭಿಸಿತ್ತು. ಗಡಿ ವಿವಾದ ಈಗ ಮತ್ತೆ ಭುಗಿಲೆದ್ದಿದೆ
ಇತ್ತೀಚೆಗಷ್ಟೇ ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಬೆಳಗಾವಿಯಲ್ಲಿ ಕರ್ನಾಟಕ ಸರ್ಕಾರಿ ಸ್ವಾಮ್ಯದ ಸಾರಿಗೆ ನಿಗಮದ ಬಸ್ಸಿನ ಕಂಡಕ್ಟರ್ ಒಬ್ಬ ಹುಡುಗಿಗೆ ಮರಾಠಿ ಭಾಷೆಯಲ್ಲಿ ಉತ್ತರಿಸದ ಹಿನ್ನೆಲೆಯಲ್ಲಿ ಹಲ್ಲೆ ನಡೆಸಲಾಗಿತ್ತು.
ಈ ಘಟನೆಯ ನಂತರ ಎರಡೂ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ಉದ್ವಿಗ್ನತೆ ಹೆಚ್ಚಿತ್ತು. ಈಗಲೂ ಅದು ಮುಂದುವರೆದಿದೆ.
ಬೆಳಗಾವಿಯಲ್ಲಿ ಮರಾಠಿ ಭಾಷಿಕರ ಸಂಖ್ಯೆ ಹೆಚ್ಚಿದ್ದು, ಅವರ ಒಂದು ಗುಂಪು ಕರ್ನಾಟಕದ ಗಡಿ ಜಿಲ್ಲೆಯನ್ನು ಮಹಾರಾಷ್ಟ್ರದೊಂದಿಗೆ ವಿಲೀನಗೊಳಿಸುವಂತೆ ಆಗಾಗ್ಗೆ ಕರೆ ನೀಡುತ್ತಿದೆ. ಇದಕ್ಕೆ ಕನ್ನಡ ಪರ ಹೋರಾಟಗಾರರು ವಿರೋಧಿಸುತ್ತಿದ್ದಾರೆ.
ಈ ಘಟನೆಯ ನಂತರ ಕರ್ನಾಟಕವು ಬೆಳಗಾವಿಯಿಂದ ಮಹಾರಾಷ್ಟ್ರಕ್ಕೆ ಬಸ್ ಸೇವೆಯನ್ನು ನಿಲ್ಲಿಸಿದರೆ, ಮಹಾರಾಷ್ಟ್ರ ಕೂಡ ಕರ್ನಾಟಕಕ್ಕೆ ಬಸ್ ಸೇವೆಯನ್ನು ನಿಲ್ಲಿಸಿತ್ತು. ಎರಡು ರಾಜ್ಯಗಳ ಗಡಿ ಪ್ರದೇಶವಾದ ಕಾಗಲ್ ತಾಲೂಕಿಗೆ ತನ್ನ ಕಾರ್ಯಾಚರಣೆಯನ್ನು ಸೀಮಿತಗೊಳಿಸಲಾಗಿದೆ.
ರಾಜ್ಯ ರಚನೆಯಾದಾಗಿನಿಂದ ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ ನಡೆಯುತ್ತಿದೆ. 1960ರಲ್ಲಿ ಮಹಾರಾಷ್ಟ್ರ ರಚನೆಯಾದಾಗ ಬೆಳಗಾವಿ, ನಿಪಾಣಿ, ಕಾರವಾರ ಸೇರಿದಂತೆ 865 ಗ್ರಾಮಗಳು ಮರಾಠಿ ಭಾಷೆಯ ಆಧಾರದ ಮೇಲೆ ಹಕ್ಕು ಸಾಧಿಸಿದರೆ, ಇದನ್ನು ಕರ್ನಾಟಕ ಬಲವಾಗಿ ವಿರೋಧಿಸಿತ್ತು.
ಈ ಪ್ರಕರಣ 1966 ರಿಂದ ಸುಪ್ರೀಂಕೋರ್ಟ್ ನಲ್ಲಿ ಬಾಕಿ ಇದೆ. ಸದ್ಯ ಈ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ಹಂತದಲ್ಲಿದೆ
