ಗಡಿ ಜಿಲ್ಲೆ ರಾಯಚೂರಿನ ಮಾನ್ವಿಯಲ್ಲಿ ಪಕ್ಷಿಗಳು ನಿಗೂಢವಾಗಿ ಸಾವನ್ನಪ್ಪಿದ್ದು ಜಿಲ್ಲೆಯಲ್ಲಿ ಹಕ್ಕಿಜ್ವರದ ಆತಂಕ ಎದುರಾಗಿದೆ.
ಪಕ್ಕದ ತೆಲಂಗಾಣದಲ್ಲಿ ಕಾಣಿಸಿಕೊಂಡ ಹಕ್ಕಿ ಜ್ವರ ಜಿಲ್ಲೆಗೂ ಹರಡಿರುವ ಶಂಕೆ ವ್ಯಕ್ತವಾಗಿದೆ.
ಮಾನ್ವಿ ಪಟ್ಟಣ, ರಬಣಕಲ್ ಸೇರಿ ಹಲವೆಡೆ ಪ್ರತಿದಿನ ಪಕ್ಷಿಗಳು ಸಾವನ್ನಪ್ಪುತ್ತಿವೆ. ಪಾರಿವಾಳ, ಕೊಕ್ಕರೆ, ಕಾಗೆ, ಕಿಂಗ್ ಫಿಶರ್, ಸುವರ್ಣಪಕ್ಷಿ ಸೇರಿ ವಿವಿಧ ಪ್ರಭೇದದ ಪಕ್ಷಿಗಳ ಸಾವನ್ನಪ್ಪಿವೆ.
ಕಳೆದ ನಾಲ್ಕೈದು ದಿನಗಳಿಂದ ಮಕ್ಸೂದ್ ಅಲಿ ಎಂಬುವರ ತೋಟದಲ್ಲಿ ಪ್ರತಿದಿನ 8 ರಿಂದ 10 ಪಕ್ಷಿಗಳು ಸಾವನ್ನಪ್ಪುತ್ತಿದ್ದು ಜನರ ಆತಂಕಕ್ಕೆ ಕಾರಣವಾಗಿದೆ.
ಮರದ ಮೇಲಿನಿಂದ ಏಕಾಏಕಿ ಕೆಳಗೆ ಬಿದ್ದು ಕೆಲಹೊತ್ತಿನಲ್ಲಿ ಸಾವನ್ನಪ್ಪುತ್ತಿವೆ. ಕೆಳಗೆ ಬಿದ್ದ ಬಳಿಕ ಕುಡಿಯಲು ನೀರನ್ನ ಇಟ್ಟರೂ ಕುಡಿಯದೆ ಪಕ್ಷಿಗಳು ಸಾವನ್ನಪ್ಪುತ್ತಿವೆ. ಪಕ್ಷಿಗಳ ಸಾವಿಗೆ ಕಾರಣ ತಿಳಿಯದೇ ಸ್ಥಳೀಯರಿಗೆ ಹಕ್ಕಿ ಜ್ವರದ ಆತಂಕ ಹೆಚ್ಚಾಗಿದೆ.
ಪಶುವೈದ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಕಣ್ಣಮುಂದೆಯೇ ಮರದಿಂದ ಬಿದ್ದ ಪಕ್ಷಿಗೆ ಇಂಜೆಕ್ಷನ್ ನೀಡಿ ರಕ್ಷಣೆ ಮಾಡಿದ್ದಾರೆ.
ಪಕ್ಷಿಗಳ ಸಾವಿಗೆ ನಿಖರ ಕಾರಣ ತಿಳಿಯಲು ಮೃತ ಪಕ್ಷಿಯ ಕಳೆಬರ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ವರದಿ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪಶುವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಪಶು ಸಂಗೋಪನೆ ಇಲಾಖೆ ಕಟ್ಟೆಚ್ಚರ ವಹಿಸಿದ್ದು, ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಕರ್ನಾಟಕ ಫೈಲ್ಸ್ ಜೊತೆ ಮಾತನಾಡಿದ ಪಶು ಸಂಗೋಪನಾ ಇಲಾಖೆಯ ಜಂಟಿ ನಿರ್ದೇಶಕ ಸಾಲಿಗೌಡರ, ಧಾರವಾಡ ಜಿಲ್ಲೆಯಲ್ಲಿ ಆತಂಕ ಬೇಡ. ಇಲಾಖೆ ಪ್ರತಿದಿನ ಮಾದರಿ ಸಂಗ್ರಹಿಸಿ ಪರೀಕ್ಷೆಗೊಳಪಡಿಸುತ್ತಿದೆ ಎಂದು ತಿಳಿಸಿದ್ದಾರೆ.
