ಬೆಂಗಳೂರು 2ನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮೂರು ಕಡೆಗೆ ಜಾಗೆ ಗುರುತಿಸಿದ್ದು, ಎಪ್ರಿಲ್ 8 ರಂದು ಕೇಂದ್ರದ ತಂಡ ಪರಿಶೀಲನೆ ನಡೆಸಲಿದೆ ಎಂದು ಕೈಗಾರಿಕಾ ಸಚಿವ ಎಮ್ ಬಿ ಪಾಟೀಲ ತಿಳಿಸಿದ್ದಾರೆ.
ಎಕ್ಸ್ ಖಾತೆಯಲ್ಲಿ ಈ ವಿಷಯ ಹಂಚಿಕೊಂಡಿರುವ ಅವರು, ಏ.7 ರಿಂದ 9ರ ನಡುವೆ ಕೇಂದ್ರದ ತಂಡ ಆಗಮಿಸಲಿದೆ ಎಂದು ಹೇಳಿದ್ದಾರೆ.
ರಾಜಧಾನಿಯಲ್ಲಿ 2ನೇ ಅಂತಾರಾಷ್ಟ್ರೀಯ ಹಸಿರು ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಕನಕಪುರ ರಸ್ತೆಯಲ್ಲಿ 2 ಹಾಗೂ ನೆಲಮಂಗಲ–ಕುಣಿಗಲ್ ರಸ್ತೆಯಲ್ಲಿ 1 ಜಾಗ ಸೇರಿದಂತೆ ಒಟ್ಟು 3 ಸ್ಥಳಗಳನ್ನು ಆಖೈರು ಮಾಡಲಾಗಿದೆ.
ಈ ಸ್ಥಳಗಳ ಪೂರ್ವಕಾರ್ಯ ಸಾಧ್ಯತಾ ಅಧ್ಯಯನಕ್ಕೆಂದು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (ಎಎಐ) ಬಹುಶಿಸ್ತೀಯ ತಂಡವು ಏ.7ರಿಂದ 9ರೊಳಗೆ ರಾಜ್ಯಕ್ಕೆ ಆಗಮಿಸಲಿದೆ.
ಈ ಸಂಬಂಧ ಈಗಾಗಲೇ ಪ್ರಾಧಿಕಾರಕ್ಕೆ ಕೆಎಸ್ಐಐಡಿಸಿ ವತಿಯಿಂದ ₹1.21 ಕೋಟಿ ಶುಲ್ಕವನ್ನು ಪಾವತಿಸಲಾಗಿದೆ. ಅವರ ವರದಿಯ ನಂತರ ಮುಂದಿನ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಸಚಿವ ಎಮ್ ಬಿ ಪಾಟೀಲ ತಿಳಿಸಿದ್ದಾರೆ.
