ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಅನ್ಯಾಯದ ವಿರುದ್ಧ ಹೋರಾಟ ಮಾಡಿದ್ದೇನೆ ಹೊರತು ಯಾರಿಗೂ ಅನ್ಯಾಯ ಮಾಡಿಲ್ಲ. ನ್ಯಾಯಾಲಯದ ಆದೇಶದಂತೆ ಶುಕ್ರವಾರ ಕೋರ್ಟಿಗೆ ಶರಣಾಗುತ್ತಿದ್ದೇನೆ ಎಂದು ಮಾಜಿ ಸಚಿವ, ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಹೇಳಿದರು.
ಕಿತ್ತೂರಿನಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಅವರು, ನ್ಯಾಯಾಲಯ ನನ್ನ ಜಾಮೀನು ರದ್ದು ಮಾಡಿದ ಕಾರಣಕ್ಕೆ ನಾನು ನ್ಯಾಯಾಲಯದ ಆದೇಶದಂತೆ ಕೋರ್ಟಗೆ ಹಾಜರಾಗುತ್ತಿದ್ದೇನೆ ಎಂದು ತಿಳಿಸಿದರು. ಅಲ್ಪಸಂಖ್ಯಾತರ ಇಲಾಖೆಯಿಂದ 8 ಹಾಸ್ಟೆಲ್ ಗಳಿಗೆ ಮಂಜೂರಾತಿ ಪಡೆದಿದ್ದು, ತಿಮ್ಮಾಪುರದಲ್ಲಿ ಅಲ್ಪಸಂಖ್ಯಾತರ ವಸತಿ ಶಾಲೆ ಕಟ್ಟಡ ಆರಂಭವಾಗಲಿದೆ ಎಂದರು.
ಧಾರವಾಡದ ಕೋಳಿ ಕೆರೆ, ಬೇಲೂರು, ನರೇಂದ್ರ ಕೆರೆಗಳಿಗೆ ತಲಾ ಮೂರು ಕೋಟಿ ಅನುದಾನ ತಂದು ಕಾಮಗಾರಿ ಆರಂಭ ಮಾಡಿಸಿದ್ದೇನೆ ಎಂದ ಅವರು, 123 ಸರ್ಕಾರಿ ಶಾಲೆಗಳ ದುರಸ್ತಿ ಮಾಡಿಸುವ ಮೂಲಕ ಧಾರವಾಡ ತಾಲೂಕು ಜಿಲ್ಲೆಯಲ್ಲಿ ಒಂದನೇ ಸ್ಥಾನದಲ್ಲಿದೆ ಎಂದರು.
ನಾನು ಇರದಿದ್ದರು, ನನ್ನ ಧರ್ಮಪತ್ನಿ, ಮಗಳು ಹಾಗೂ ಕ್ಷೇತ್ರದ ಮುಖಂಡರು, ಪಕ್ಷದ ಅಧ್ಯಕ್ಷರು ಜನರ ಕೆಲಸ ಮಾಡಿಸಿಕೊಡುತ್ತಾರೆ ಎಂದಿರುವ ಅವರು, ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದಿದ್ದೇನೆ ಎಂದರು.
ನಾನು ಕಷ್ಟದಲ್ಲಿದ್ದೇನೆ ಎಂದು ತುಪ್ಪ ಸುರಿಯುವ ಕೆಲಸ ಮಾಡಬೇಡಿ ಎಂದು ಮಾಧ್ಯಮಗಳಿಗೆ ಮನವಿ ಮಾಡಿದ ಅವರು, ಯಾರದೋ ಮಾತು ಕೇಳಿ ಇಲ್ಲಸಲ್ಲದ ಸುದ್ದಿ ಮಾಡದೇ, ಸತ್ಯದ ಪರ ಸುದ್ದಿ ಮಾಡಿ ಎಂದು ಮನವಿ ಮಾಡಿದರು.
ವಿದ್ಯಾರ್ಥಿ ದೆಸೆಯಿಂದಲೂ ಅನ್ಯಾಯದ ವಿರುದ್ಧ ಹೋರಾಟ ಮಾಡಿದ ನಾನು ಯಾರಿಗೂ ಅನ್ಯಾಯ ಮಾಡಿಲ್ಲ. ನನಗೆ ಈಗ ಕಷ್ಟ ಬಂದಿದೆ. ನ್ಯಾಯಾಲಯದ ಆದೇಶಕ್ಕೆ ತಲೆ ಬಾಗುತ್ತೇನೆ, ಸತ್ಯಕ್ಕೆ ಜಯ ಸಿಗಲಿದೆ ಎಂದರು.
ಈ ಸಂದರ್ಭದಲ್ಲಿ ಧರ್ಮಪತ್ನಿ ಶಿವಲೀಲಾ ಕುಲಕರ್ಣಿ, ಪಕ್ಷದ ಅಧ್ಯಕ್ಷರಾದ ಅರವಿಂದ ಏಗನಗೌಡರ, ಈಶ್ವರ ಶಿವಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
