ವಿಧ್ವಂಸಕ ಕೃತ್ಯ ತಡೆ, ಸ್ಪೋಟಕ ಪತ್ತೆಯಲ್ಲಿ ಸೈ ಎನಿಸಿಕೊಂಡಿದ್ದ ದಾವಣಗೆರೆಯ ಪೊಲೀಸ ಶ್ವಾನ ಇಂದು ಉಸಿರು ನಿಲ್ಲಿಸಿತು. ಗಣ್ಯಾತಿಗಣ್ಯರ ಭದ್ರತಾ ಕಾರ್ಯ ಕೈಗೊಂಡಿದ್ದ ಜಿಲ್ಲಾ ಪೊಲೀಸ್ ಶ್ವಾನದಳದ ಸೌಮ್ಯಾ ಹೆಸರಿನ ಶ್ವಾನ ಒಂದು ವಾರದಿಂದ ಅನಾರೋಗ್ಯಕ್ಕೆ ಒಳಗಾಗಿತ್ತು. ಸೌಮ್ಯ ಮೃತಪಟ್ಟ ಹಿನ್ನೆಲೆಯಲ್ಲಿ ಇಲಾಖೆಯಿಂದ ಸಕಲ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.
ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದ ಆವರಣದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಜಿಲ್ಲಾ ಸಶಸ್ತ್ರ ಮೀಸಲು ಪಡೆದ ಡಿವೈಎಸ್ಪಿ ಪ್ರಕಾಶ್ ಸೇರಿ ಅಧಿಕಾರಿ, ಸಿಬ್ಬಂದಿ ತಮ್ಮ ಇಲಾಖೆಯ ಶ್ವಾನ ಸೌಮ್ಯಾ ಅಗಲಿಕೆಗೆ ಕಂಬನಿ ಮಿಡಿದು, ಅಂತಿಮ ಗೌರವ ಸಲ್ಲಿಸಿದರು.
ಅಗಲಿದ ಶ್ವಾನ ಪಾರ್ಥಿವ ಶರೀರಕ್ಕೆ ಹಾರ ಇಟ್ಟು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ, ಡಿಎಆರ್ ಡಿವೈಎಸ್ಪಿ ಪ್ರಕಾಶ್ ಸೇರಿ ಅಧಿಕಾರಿ ಸಿಬ್ಬಂದಿ ಸೆಲ್ಯೂಟ್ ಮೂಲಕ ಅಂತಿಮ ನಮನ ಸಲ್ಲಿಸಿದರು. ಶ್ವಾನ ಸೌಮ್ಯಾ ಸಾಧನೆ ಬಗ್ಗೆ ಅಧಿಕಾರಿಗಳು ಕೊಂಡಾಡಿದರು. ನಿಧನ ಹೊಂದಿದ ಶ್ವಾನ ಸೌಮ್ಯ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ, ಮುಖ್ಯಮಂತ್ರಿ, ಸೇರಿದಂತೆ ಅನೇಕ ಗಣ್ಯರ ಭದ್ರತಾ ಉಸ್ತುವಾರಿ ವಹಿಸಿಕೊಂಡಿತ್ತು.