ಬೈಂದೂರಿನ ಬಿಜೆಪಿ ಮುಖಂಡ, ಸಮಾಜ ಸೇವಕರೋರ್ವರಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಸಂಗಡಿಗರೊಂದಿಗೆ ಸೇರಿಕೊಂಡು ಸುಮಾರು ಏಳು ಕೋಟಿ ರೂಪಾಯಿ ವಂಚನೆ ಮಾಡಿದ ಆರೋಪ ಎದುರಿಸುತ್ತಿರುವ ಚೈತ್ರ ಕುಂದಾಪುರ ಎಂಬಾಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೆಲ ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಚೈತ್ರ ಕುಂದಾಪುರಳನ್ನು ಉಡುಪಿಯ ಕೃಷ್ಣ ಮಠದ ಪಾರ್ಕಿಂಗ್ ಏರಿಯಾದಲ್ಲಿ ಮಂಗಳವಾರ ರಾತ್ರಿ ಬೆಂಗಳೂರಿನ ಸಿಸಿಬಿ ಪೊಲೀಸರು ಸೀನಿಮಿಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಚೈತ್ರಾಳ ಜೊತೆ ಮತ್ತಿಬ್ಬರು ಆರೋಪಿಗಳನ್ನೂ ಸಹ ಸಿ ಸಿ ಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸ್ವಘೋಷಿತ ಹಿಂದೂ ಸಂಘಟನೆಯ ನಾಯಕಿ, ಭಾಷಣಕಾರ್ತಿ, ಚೈತ್ರಾ ಕುಂದಾಪುರ ಮಾಡಿರುವ ವಂಚನೆ ಬಗ್ಗೆ ಬಿಜೆಪಿ ಮುಖಂಡ ಗೋವಿಂದಬಾಬು ಪೂಜಾರಿ ಬೆಂಗಳೂರಿನಲ್ಲಿ ದೂರು ನೀಡಿದ್ದರು. ಅದರಂತೆ ಮಂಗಳವಾರ ಬೆಂಗಳೂರಿನಿಂದ ಸಿಸಿಬಿ ಪೊಲೀಸರು ಉಡುಪಿಗೆ ಆಗಮಿಸಿ ಆಕೆಯನ್ನು ವಶಕ್ಕೆ ಪಡೆದಿದ್ದಾರೆ.
ಚೈತ್ರಾ ಕುಂದಾಪುರ ಜೊತೆಗೆ ಶ್ರೀಕಾಂತ್ ನಾಯಕ್ ಪೆಲತ್ತೂರು ನನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದು, ಇಬ್ಬರು ಆರೋಪಿಗಳನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಈ ವಂಚನೆ ಪ್ರಕರಣದಲ್ಲಿ ಈವರೆಗೆ ಗಗನ್ ಕಡೂರು, ಪ್ರಸಾದ್ ರನ್ನು ಈಗಾಗಲೇ ವಶಕ್ಕೆ ಪಡೆದಿದ್ದು ತನಿಖೆ ನಡೆಯುತ್ತಿದೆ.