ಧಾರವಾಡದಲ್ಲಿ ನಡೆದ ಈದ್ ಮಿಲಾದ್ ಹಬ್ಬದ ಮೆರವಣಿಗೆಗೆ ಡಿ ಜೆ ಹಚ್ಚಲು ಅನುಮತಿ ಕೊಟ್ಟವರ ಬಗ್ಗೆ ಧಾರವಾಡ ಅಂಜುಮನ್ ಪ್ರಶ್ನೆ ಎತ್ತಿದೆ. ಗಣೇಶ ವಿಸರ್ಜನೆಗೆ ಅಡ್ಡಿಯಾಗಬಾರದು ಎಂದು ಧಾರವಾಡದ ಅಂಜುಮನ್ ಇಸ್ಲಾಂ ಸಂಸ್ಥೆ, 28-09-2023 ರಂದು ನಡೆಸಬೇಕಿದ್ದ ಈದ್ ಮಿಲಾದ್ ಮೆರವಣಿಗೆಯನ್ನು 29-09-2023 ರಂದು ಶುಕ್ರವಾರ ನಡೆಸುವದಾಗಿ ಪೊಲೀಸ್ ಆಯುಕ್ತರಿಗೆ ಪತ್ರ ಮುಖೇನ ತಿಳಿಸಿತ್ತು.
ಅಲ್ಲದೆ ಮೆರವಣಿಗೆ ಸಂದರ್ಭದಲ್ಲಿ ಡಿ ಜೆ ಹಚ್ಚಲು ಅನುಮತಿ ನೀಡದಂತೆ ಪೊಲೀಸ್ ಆಯುಕ್ತರಿಗೆ ನೀಡಿದ ಪತ್ರದಲ್ಲಿ, ಸಂಸ್ಥೆ ತೆಗೆದುಕೊಂಡ ನಿರ್ಧಾರ ತಿಳಿಸಿತ್ತು. 20-09-2023 ರಂದು ಪೊಲೀಸ್ ಆಯುಕ್ತರಿಗೆ ಪತ್ರ ಬರೆದ ಅಂಜುಮನ್ ಸಂಸ್ಥೆ, ಈದ್ ಮಿಲಾದ್ ಮೆರವಣಿಗೆಯಲ್ಲಿ ಡಿ ಜೆ ನಿಷೇಧಿಸುವಂತೆ ಮನವಿ ಮಾಡಿ, ಒಂದು ವೇಳೆ ಡಿ ಜೆ ಹಚ್ಚಿದರೆ, ಅದಕ್ಕೂ ಮತ್ತು ಅಂಜುಮನ್ ಸಂಸ್ಥೆಗೂ ಸಂಬಂಧವಿಲ್ಲ ಎಂದು ಖಡಕ್ಕಾಗಿ ಹೇಳಿತ್ತು. ಪ್ರವಾದಿ ಮೊಹಮ್ಮದ ಅವರ ಸಂದೇಶ ಸಾರುತ್ತಾ ಪ್ರಮುಖ ಬಿದಿಗಳಲ್ಲಿ ಸಂಚರಿಸಿ, ಮತ್ತೆ ಅಂಜುಮನ್ ಆವರಣಕ್ಕೆ ಬರುವದಾಗಿ ಹೇಳಿ, ಮೆರವಣಿಗೆ ಹೋಗುವ ಮಾರ್ಗ ನಮೋದಿಸಿತ್ತು.
ಅಂಜುಮನ್ ಸಂಸ್ಥೆ ಡಿ ಜೆ ಬೇಡ ಅಂದರು ಅನುಮತಿ ಕೊಟ್ಟವರು ಯಾರು?
ಹೀಗಂತ ಇದೀಗ ಅಂಜುಮನ್ ಅಧ್ಯಕ್ಷ ಇಕ್ಬಾಲ್ ಜಮಾದಾರ ಪ್ರಶ್ನಿಸಿದ್ದಾರೆ. ಶುಕ್ರವಾರದಂದು ನಡೆದ ಮೆರವಣಿಗೆ ಸಂದರ್ಭದಲ್ಲಿ ಒಂದೆರೆಡು ಡಿ ಜೆ ಗಳಲ್ಲಿ ಅಶ್ಲೀಲ ಪದ ಬಳಕೆ ಮಾಡಿದ್ದು, ಸಂಸ್ಥೆಗೆ ನೋವು ಉಂಟು ಮಾಡಿದೆ ಎಂದು ಜಮಾದಾರ ತಿಳಿಸಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ, ಡಿ ಜೆ ಕುರಿತು ಅಂಜುಮನ್ ಇಸ್ಲಾಮ್ ಸ್ಪಷ್ಟ ನಿಲುವನ್ನು ತಿಳಿಸಿತ್ತು. ಡಿ ಜೆ ಹಚ್ಚಲು ಅನುಮತಿ ಕೊಟ್ಟು, ಸಂಸ್ಥೆಯ ಹೆಸರು ಕೆಡಿಸಲು ಪ್ರಯತ್ನಿಸಿದ್ದು ಯಾರು ಎಂದು ಪ್ರಶ್ನಿಸಿದ್ದಾರೆ. ಡಿ ಜೆ ನಿಷೇಧಿಸಿ, ನಿರ್ಧಾರ ತೆಗೆದುಕೊಂಡ ಅಂಜುಮನ್ ಸಂಸ್ಥೆ ಜೊತೆ ನಿಲ್ಲಬೇಕಾದ ಪೊಲೀಸ್ ಇಲಾಖೆ, ಈ ರೀತಿ ನಡೆದುಕೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಕ್ಕದ ಹುಬ್ಬಳ್ಳಿಯಲ್ಲಿ ನಡೆದ ಮೆರವಣಿಗೆಯಲ್ಲಿ ಹುಬ್ಬಳ್ಳಿ ಅಂಜುಮನ್ ಸಂಸ್ಥೆ ಡಿ ಜೆ ಮೇಲೆ ನಿಷೇಧ ಹೇರಿತ್ತು. ಹುಬ್ಬಳ್ಳಿಯಲ್ಲಿ ನಡೆದ ಮೆರವಣಿಗೆಯಲ್ಲಿ ಕುರಾಣ ಪಠಣದ ಜೊತೆ ಪ್ರವಾದಿ ಮೊಹಮ್ಮದ ಪೈಗಂಬರ್ ಅವರ ಸಂದೇಶಗಳನ್ನು ವಾಚಿಸುತ್ತ ಹೋಗಿದ್ದು, ಈದ್ ಮಿಲಾದ್ ಮೆರವಣಿಗೆ ಮಾದರಿಯಾಗಿದೆ. ಅದೇ ತರ ಧಾರವಾಡ ಅಂಜುಮನ್ ಸಂಸ್ಥೆಯ ನಿಲುವಿಗೆ ವಿರುದ್ಧವಾಗಿ ಅನುಮತಿ ನೀಡಿದವರ ಮೇಲೆ ಅಂಜುಮನ್ ಸಂಸ್ಥೆ ಅಸಮಾಧಾನ ಹೊರಹಾಕಿದೆ. ಇದೆಲ್ಲದಕ್ಕೂ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಅವರು, ಡಿ ಜೆ ಹಚ್ಚಲು ಅನುಮತಿ ಕೊಟ್ಟವರ ಬಗ್ಗೆ ಸ್ಪಷ್ಟಪಡಿಸಬೇಕಾಗಿದೆ.