ಇಂದು ಯಾವುದನ್ನು ನಾವು ವಿಶಾಲ ಕರ್ನಾಟಕ, ಅಖಂಡ ಕರ್ನಾಟಕ ಎಂದು ಕರೆಯುತ್ತೇವೆಯೋ ಅದು ಆರು ದಶಕಗಳ ಹಿಂದೆ ಸುಮಾರು ೨೦ ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿತ್ತು. ಇದು ನಮ್ಮ ನೆಲ ಎಂದು ಹೇಳಿಕೊಳ್ಳಲು ಮೈಸೂರು ಸಂಸ್ಥಾನ ಹೊರತುಪಡಿಸಿ ಬೇರೆ ನಿರ್ದಿಷ್ಟ ಪ್ರದೇಶ ಇರಲಿಲ್ಲ. ಕನ್ನಡಿಗರು ಪರಕೀಯರಂತೆ ಜೀವನ ನಡೆಸುವ ಅಸಹನೀಯ ಪರಿಸ್ಥಿತಿ ಇತ್ತು. ಅಂತಹ ಸ್ಥಿತಿಯಲ್ಲಿ ಮೊಳಕೆಯೂಡೆದಿದ್ದೆ ಕರ್ನಾಟಕ ಏಕೀಕರಣ ಚಳುವಳಿ.
ಕರ್ನಾಟಕ ರೂಪುಗೊಳ್ಳಲು ಕಾರಣರಾದವರ ಪೈಕಿ ಒಬ್ಬರಾದ ರಾ.ಹ. ದೇಶಪಾಂಡೆ ಹಾಗೂ ಕೆಲವು ಸಮಾನ ಮನಸ್ಕರು ಒಂದೆಡೆ ಸೇರಿದರು. ಕನ್ನಡ ಭಾಷೆಯ ದುಃಸ್ಥಿತಿ ದೂರ ಮಾಡಲೆಂದು ೨೦-೭-೧೮೯೦ ರಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಧಾರವಾಡದಲ್ಲಿ ಸ್ಥಾಪನೆ ಮಾಡಲಾಯಿತು. ವಿವಿಧ ಪ್ರಾಂತಗಳಲ್ಲಿ ಹರಿದು ಹಂಚಿ ಹೋಗಿದ್ದ ಪ್ರದೇಶಗಳನ್ನು ಒಂದು ಮಾಡಲು, ಆಲೂರು ವೆಂಕಟರಾಯರು, ಗದಿಗೆಯ್ಯ ಹೊನ್ನಾಪುರಮಠ ಮತ್ತು ಕಡಪಾ ರಾಘವೇಂದ್ರರಾಯರು ಸೇರಿ ೧೯೧೬ರಲ್ಲಿ ಸ್ಥಾಪಿಸಿದ ’ಕರ್ನಾಟಕ ಸಭೆ’ ಕರ್ನಾಟಕ ಏಕೀಕರಣದ ಬೇಡಿಕೆಗೆ ಇಂಬು ಕೊಟ್ಟಿತು. ಗದಿಗಯ್ಯಾ ಹೊನ್ನಾಪುರಮಠ ಮನೆಯ ಅಟ್ಟದ ಮೇಲೆ ಜನೆವರಿ 26, 1916 ರಲ್ಲಿ ಕರ್ನಾಟಕ ಏಕೀಕರಣದ ಮೊದಲ ದುಂಡು ಮೇಜಿನ ಸಭೆ ನಡೆಯಿತು.
ಧಾರವಾಡದ ರೈಟರ್ಸ್ ಗಲ್ಲಿಯಲ್ಲಿರುವ ಗದಿಗಯ್ಯಾ ಹೊನ್ನಾಪುರಮಠ ಅವರ ಮನೆಯಲ್ಲಿ ಇಂದಿಗೂ ಸಹ ದುಂಡು ಮೇಜಿನ ಸಭೆ ನಡೆದ ಸ್ಥಳವನ್ನು ಹಾಗೆಯೇ ಕಾಪಾಡಿಕೊಂಡು ಬರಲಾಗಿದೆ. ಹೊನ್ನಾಪುರಮಠ ಅವರ ಮನೆಯಲ್ಲಿ ಮೊಮ್ಮಕ್ಕಳು ಪ್ರತಿ ವರ್ಷ ಕನ್ನಡ ರಾಜ್ಯೋತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದಾರೆ.
ಕನ್ನಡ ನೆಲ ಜಲ ಭಾಷೆ ವಿಚಾರ ಬಂದಾಗ ಸಿಡಿದೆದ್ದ ಧಾರವಾಡ, ಕರ್ನಾಟಕ ಏಕೀಕರಣಕ್ಕೆ ದೊಡ್ಡ ಕೊಡುಗೆ ನೀಡಿದೆ. ಕರ್ನಾಟಕ ಏಕೀಕರಣಕ್ಕೆ ದುಡಿದವರನ್ನು ಕೇವಲ ಭಾಷಣದಲ್ಲಿ ಸ್ಮರಿಸುವ ಸಚಿವರು ಮತ್ತು ಶಾಸಕರು, ಧಾರವಾಡದ ರೈಟರ್ಸ್ ಗಲ್ಲಿಯಲ್ಲಿರುವ ಕರ್ನಾಟಕ ಏಕೀಕರಣಕ್ಕೆ ನಡೆದ ಮೊದಲ ದುಂಡು ಮೇಜಿನ ಸಭೆ ನಡೆದ ಸ್ಥಳ ಹೊನ್ನಾಪುರಮಠ ಅವರ ಮನೆಗೆ ಹೋಗದಿರುವದು ವಿಪರ್ಯಾಸವೇ ಸರಿ.
ಗದಿಗೆಯ್ಯ ಹೊನ್ನಾಪುರಮಠ ಇವರ ಮನೆಯ ಸೊಸೆ ದುಂಡು ಮೇಜಿನ ಸಭೆ ನಡೆದ ಸ್ಥಳವನ್ನು ಹಾಗೆಯೇ ಉಳಿಸಿಕೊಂಡು ಬಂದಿದ್ದಾರೆ.
1 thought on “ಕರ್ನಾಟಕ ಏಕೀಕರಣದ ಮೊದಲ ದುಂಡು ಮೇಜಿನ ಸಭೆ ನಡೆದಿದ್ದು ಧಾರವಾಡದ ಆ ಮನೆಯ ಅಟ್ಟದ ಮೇಲೆ. ಮೇಜು, ಕುರ್ಚಿಗಳು ಈಗಲೂ ಹಾಗೆ ಇವೆ.”
What unification of Karnataka we are enjoying is hard work of Alur Venkatrao,Gadigayya Honnapurmath,Kadapa Raghavendra Rao and Ra,ha Deshpande and many other’s . Thanks a lot for enlighting and preserving hundred year old moment as it is.