ದೇಶದ ಗಮನ ಸೆಳೆದಿರುವ ಪಂಚರಾಜ್ಯಗಳ ಚುನಾವಣೆಗಳ ಪೈಕಿ ಮಧ್ಯಪ್ರದೇಶದ ವಿಧಾನಸಭೆಗೆ ಇಂದು ಮತದಾನ ಆರಂಭವಾಗಿದೆ. ಬೆಳಿಗ್ಗೆಯಿಂದ ಸರತಿ ಸಾಲಿನಲ್ಲಿ ನಿಂತಿರುವ ಮತದಾರರು ಉತ್ಸಾಹದಿಂದ ಮತ ಚಲಾಯಿಸುತ್ತಿದ್ದಾರೆ. ಡಿಸೆಂಬರ್ 3 ರಂದು ಫಲಿತಾಂಶ ಪ್ರಕಟವಾಗಲಿದೆ. ಮಧ್ಯಪ್ರದೇಶ ಚುನಾವಣೆಯ ಡಿಟೇಲ್ ರಿಪೋರ್ಟ್ ಇಲ್ಲಿದೆ ನೋಡಿ.
ಮಧ್ಯಪ್ರದೇಶದಲ್ಲಿ 5.6 ಕೋಟಿ ಜನ ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ. ಈ ಪೈಕಿ 2.88 ಕೋಟಿ ಪುರುಷರು , 2.72 ಕೋಟಿ ಮಹಿಳಾ ಮತದಾರರಿದ್ದಾರೆ. ಅಲ್ಲದೆ 22 ಲಕ್ಷ 36 ಸಾವಿರ ಜನರು ಮೊದಲ ಬಾರಿಗೆ ಮತ ಚಲಾಯಿಸಲಿದ್ದಾರೆ.
ಆಶ್ಚರ್ಯವೆಂದರೆ 80 ವಯಸ್ಸಿಗೂ ಮೇಲ್ಪಟ್ಟವರು ದೊಡ್ಡ ಸಂಖ್ಯೆಯಲ್ಲಿದ್ದು, 6.50 ಲಕ್ಷದಷ್ಟಿದ್ದಾರೆ. ಅತ್ಯಂತ ಹಿರಿಯ ಮತದಾರರನ್ನು ಮಧ್ಯಪ್ರದೇಶ ಹೊಂದಿರುವದು ವಿಶೇಷ.
ಚುನಾವಣಾ ಅಖಾಡಾದಲ್ಲಿ ಕ್ರಿಮಿನಲ್ ಗಳೇ ಹೆಚ್ಚು
230 ಸ್ಥಾನಗಳಿಗೆ 2534 ಜನ ಸ್ಪರ್ಧಾ ಕಣದಲ್ಲಿದ್ದು, ಇದರಲ್ಲಿ 253 ಮಹಿಳಾ ಸ್ಪರ್ಧಿಗಳಿದ್ದಾರೆ. 230 ರ ಪೈಕಿ 472 ಜನ ಉಮೇದುವಾರರು ಅಪರಾಧಿಕ ಹಿನ್ನೇಲೆ ಹೊಂದಿದ್ದಾರೆ. ಅಲ್ಲದೆ 291 ಜನ ಗಂಭೀರವಾದಂತ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. 727 ಉಮೇದುವಾರರು ಕೋಟ್ಯಧಿಪತಿಯಾಗಿದ್ದಾರೆ.
230 ಸ್ಥಾನಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯುತ್ತಿದೆ. ಪರಿಶಿಷ್ಟ ಜಾತಿಗೆ 33 ಪರಿಶಿಷ್ಟ ಪಂಗಡಕ್ಕೆ 44 ಸ್ಥಾನಗಳು ಮೀಸಲಾಗಿವೆ. ಮಧ್ಯಪ್ರದೇಶದಲ್ಲಿ ಕಾಂಗ್ರೇಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಕಂಡು ಬರುತ್ತಿದೆ. ಮಧ್ಯಪ್ರದೇಶದ 230 ಸ್ಥಾನಗಳಿಗೆ ನಡೆದಿರುವ ಚುನಾವಣೆಯಲ್ಲಿ 64523 ಮತಗಟ್ಟೆ ಸ್ಥಾಪನೆ ಮಾಡಲಾಗಿದೆ.