ನವಲಗುಂದ ರಾಮಲಿಂಗ ಕಾಮಣ್ಣ, ಪವಾಡ ಕಾಮಣ್ಣ ಎಂದೆ ಪ್ರಸಿದ್ದಿ ಪಡೆದಿದೆ. ಮೂರ್ನಾಲ್ಕು ರಾಜ್ಯಗಳ ಭಕ್ತರನ್ನು ಹೊಂದಿರುವ ರಾಮಲಿಂಗ ಕಾಮಣ್ಣನ ದರ್ಶನಕ್ಕೆ ಸಾಗರೋಪಾದಿಯಲ್ಲಿ ಜನ ಬರುತ್ತಾರೆ. ಬೇಡಿದ ವರವನ್ನು ಈಡೇರಿಸುವ ಕಾಮಣ್ಣ ಎಂದೆ ಖ್ಯಾತಿಗಳಿಸಿದ ರಾಮಲಿಂಗ ಕಾಮಣ್ಣ ಹೋಳಿ ಹುಣ್ಣಿಮೆಯ ಪ್ರಮುಖ ಆಕರ್ಷಣೆ. ಅಂತಹ ಪವಾಡ ಕಾಮಣ್ಣನಿಗೆ ದೋಖಾ ಮಾಡಲಾಗಿದೆ.
ಹೋಳಿ ಹುಣ್ಣಿಮೆಯಂದು ರಾಮಲಿಂಗ ಕಾಮಣ್ಣನ ದರ್ಶನಕ್ಕೆ ಬಂದವರು ಹುಂಡಿಯಲ್ಲಿ ಕೋಟ್ಯಾಂತರ ರೂಪಾಯಿ ಹಾಕಿ ಹೋಗುತ್ತಾರೆ. ಪ್ರತಿ ವರ್ಷ ಕೋಟಿ ಕೋಟಿ ಲೆಕ್ಕದಲ್ಲಿ ದೇಣಿಗೆ ಸಂಗ್ರಹವಾಗುತ್ತದೆ. ಹಾಗೆ ಸಂಗ್ರಹವಾದ ಹಣದಲ್ಲಿ ರಾಮಲಿಂಗ ಕಾಮಣ್ಣನ ಮೇಲುಸ್ತುವಾರಿ ವಹಿಸಿದ ಕೆಲವರು ದೇಣಿಗೆ ಹಣ ಬಳಸಿಕೊಂಡು ಬದುಕು ಕಟ್ಟಿಕೊಂಡಿದ್ದು ಬಹಿರಂಗವಾಗಿದೆ.
ಯಾರಿಗೂ ಗೊತ್ತಾಗದ ಹಾಗೆ, ಕಾಮಣ್ಣನಿಗೆ ದೇಣಿಗೆ ರೂಪದಲ್ಲಿ ಬಂದ ಹಣದ ಪೈಕಿ 50 ಲಕ್ಷ ರೂಪಾಯಿ ಬಳಸಿಕೊಂಡು ಮರಳು ಗಣಿಗಾರಿಕೆ ನಡೆಸಿ, ಎರಡು ಕೋಟಿ ರೂಪಾಯಿ ಲಾಭ ಮಾಡಿಕೊಂಡಿದ್ದರ ಬಗ್ಗೆ ಚರ್ಚೆ ನಡೆದಿದೆ. ಈ ಹಗರಣ ಹೊರಗೆ ತರಲೆಂದೆ ಊರಿನ ಗಣ್ಯರು ನಿರಂತರ ಸಭೆ ನಡೆಸಿ, ಹಣ ವಸೂಲಿ ಮಾಡುತ್ತಿದ್ದಾರೆ.
ಯಾವಾಗ ರಾಮಲಿಂಗ ಕಾಮಣ್ಣನ ಹಣ ದುರ್ಬಳಿಕೆಯಾಯ್ತೋ ಆವಾಗ ಎಚ್ಚೆತ್ತುಕೊಂಡ ಊರಿನ ಗಣ್ಯರು, ರಾಯನಗೌಡ ಪಾಟೀಲ ನೇತೃತ್ವದಲ್ಲಿ ಸಭೆ ನಡೆಸಿ ಲೆಕ್ಕ ಕೇಳಲು ಆರಂಭಿಸಿದ್ದಾರೆ. ಹಣ ಕೊಳ್ಳೆ ಹೊಡೆದವರ ಹತ್ತಿರ ಒಂದೂವರೆ ಕೋಟಿಗೂ ಹೆಚ್ಚು ಹಣವನ್ನು ವಾಪಸ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಒಂದು ಅಂದಾಜಿನಂತೆ ಇನ್ನು ನಾಲ್ಕು ಕೋಟಿ ಹಣ ಲೆಕ್ಕಕ್ಕೆ ಸಿಗುತ್ತಿಲ್ಲ ಎನ್ನಲಾಗಿದೆ. ಕಾಮಣ್ಣನ ಹಣದಲ್ಲಿ ಮರಳು ಗಣಿಗಾರಿಕೆ ನಡೆಸಿದವರಾರು, ಎರಡು ಕೋಟಿ ಲಾಭ ಪಡೆದವರಾರು, ಬಡ್ಡಿ ದಂದೆ ಶುರು ಮಾಡಿದವರು ಯಾರು ಎಂಬುದರ ಬಗ್ಗೆ ಮುಂದಿನ ವರದಿಯಲ್ಲಿ ಸಮಗ್ರ ಮಾಹಿತಿ ಕೊಡುತ್ತಿದ್ದೇವೆ.