ರಾಷ್ಟ್ರವ್ಯಾಪಿ ಸುದ್ದಿ ಮಾಡಿದ್ದ ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿ ಓ ಡಿ ಹಂತಕ ಫಯಾಜನನ್ನು ವಶಕ್ಕೆ ಪಡೆದಿದೆ. ಧಾರವಾಡಕ್ಕೆ ಬಂದಿಳಿದ ಸಿ ಓ ಡಿ ಅಧಿಕಾರಿಗಳು ಹುಬ್ಬಳ್ಳಿಯ ಒಂದನೇ ಜೆ ಎಮ್ ಎಫ್ ಸಿ ನ್ಯಾಯಾಲಯದ ಆದೇಶದಂತೆ 6 ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ.
ಬಿಗಿ ಪೊಲೀಸ್ ಭದ್ರತೆಯಲ್ಲಿ ಹಂತಕ ಫಯಾಜನನ್ನು ಸಿ ಓ ಡಿ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದಾರೆ. ಧಾರವಾಡದ ಕೇಂದ್ರ ಕಾರಾಗ್ರಹದಲ್ಲಿಯೇ ಹಂತಕ ಫಯಾಜನ ಆರೋಗ್ಯ ಪರೀಕ್ಷೆ ನಡೆಸಿರುವ ಅಧಿಕಾರಿಗಳು ಸ್ಥಳ ಮಹಜರಿಗಾಗಿ ಆತನನ್ನು ಹುಬ್ಬಳ್ಳಿಯ ಬಿವಿಬಿ ಕಾಲೇಜಿಗೆ ಬಿಗಿ ಭದ್ರತೆಯಲ್ಲಿ ಕರೆದುಕೊಂಡು ಹೋಗಿದ್ದಾರೆ.
ಸಿ ಓ ಡಿ ಎಸ್ ಪಿ ವೆಂಕಟೇಶ ನೇತ್ರತ್ವದ ತಂಡ ಪ್ರಕರಣದ ತನಿಖೆ ಕೈಗೊಂಡಿದ್ದು, ಸ್ಪೋಟಕ ಮಾಹಿತಿ ಹೊರಗೆಡುವಲಿದ್ದಾರೆ. ನೇಹಾ ಕೊಲೆ ಪ್ರಕರಣ ಸದ್ದು ಮಾಡುತ್ತಿದ್ದಂತೆ ಹಂತಕನ ಎನ್ಕೌಂಟರ್ ಮಾಡುವಂತೆ ವಿವಿಧ ಸಂಘಟನೆಗಳು ಒತ್ತಾಯ ಮಾಡಿದ್ದವು. ಗರಿಷ್ಟ ಶಿಕ್ಷೆ ನೀಡುವ ಮೂಲಕ, ಹೆಣ್ಮಕ್ಕಳ ರಕ್ಷಣೆ ಬಗ್ಗೆ ಸರ್ಕಾರ ಬದ್ಧತೆ ತೋರಿಸಬೇಕೆಂದು ಆಗ್ರಹಿಸಿದ್ದವು. ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿತ್ತು. ಇದನ್ನ ಮನಗಂಡ ಸರ್ಕಾರ ನೇಹಾ ಕೊಲೆ ಪ್ರಕರಣವನ್ನು ಸಿ ಓ ಡಿ ಗೆ ವಹಿಸಿ ಆದೇಶ ನೀಡಿತ್ತು. ಅಲ್ಲದೆ. ವಿಶೇಷ ತ್ವರಿತಗತಿ ನ್ಯಾಯಾಲಯ ಸ್ಥಾಪಿಸಿ, 90 ದಿನದಿಂದ 120 ದಿನಗಳ ಒಳಗೆ ಆರೋಪಿಗೆ ಗಲ್ಲು ಶಿಕ್ಷೆ ನೀಡುವ ಹಾಗೆ ನೋಡಿಕೊಳ್ಳುವದಾಗಿ ಕಾನೂನು ಸಚಿವ ಎಚ್ ಕೆ ಪಾಟೀಲ ತಿಳಿಸಿದ್ದರು.