ನವಗ್ರಹ ತೀರ್ಥ ಕ್ಷೇತ್ರ ಎಂದೇ ಖ್ಯಾತಿ ಪಡೆದಿರುವ ಇಲ್ಲಿಗೆ ಸಮೀಪದ ವರೂರು ಸುಕ್ಷೇತ್ರದಲ್ಲಿ ಹನ್ನೆರಡು ವರ್ಷಗಳ ಬಳಿಕ ಈಗ ಮಹಾ ಮಸ್ತಕಾಭೀಷೇಕ ಕಾರ್ಯಕ್ರಮವನ್ನು ನಡೆಸಲು ನಿರ್ಧರಿಸಲಾಗಿದೆ.
405 ಅಡಿ ಎತ್ತರದ ಸುಮೇರು ಪರ್ವತದ ಮೂಲಕ ರಾಷ್ಟ್ರ ಕಲ್ಯಾಣಕ್ಕೆ ಸಂಕಲ್ಪ ಮಾಡಲಾಗಿದ್ದು, ಶ್ರೀ ಗುಣಧರನಂದಿ ಮಹಾರಾಜರ ನೇತೃತ್ವದಲ್ಲಿ ಜೈನ ತೀರ್ಥಂಕರರ ಸಮಾಗಮದಲ್ಲಿ 2025ರ ಜನವರಿ 15ರಿಂದ 26ರ ವರೆಗೆ ಮಹಾ ಮಸ್ತಕಾಭೀಷೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಹಾಮಸ್ತಕಾಭಿಷೇಕ ಸಮಿತಿ ಅಧ್ಯಕ್ಷ ಡಾ.ವೀರೇಂದ್ರ ಹೆಗ್ಗಡೆ ಅವರು ಘೋಷಣೆ ಮಾಡಿದರು.
ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಮಹೋತ್ಸವ ಮುಹೂರ್ತ ಉದ್ಘೋಷ ಕಾರ್ಯಕ್ರಮದಲ್ಲಿ ಮಹಾ ಮಸ್ತಕಾಭೀಷೇಕದ ದಿನಾಂಕ ನಿಗದಿ ಮಾಡಲಾಗಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನು ಮಹಾ ಮಸ್ತಕಾಭೀಷೇಕದ ಅಧ್ಯಕ್ಷರನ್ನಾಗಿ ಘೋಷಣೆ ಮಾಡಲಾಯಿತು.
ಅಲ್ಲದೇ ಇದೇ ವೇಳೆ ವೀರೇಂದ್ರ ಹೆಗ್ಗಡೆಯವರಿಗೆ ಜವಾಬ್ದಾರಿ ವಹಿಸಿಕೊಂಡಿದ್ದಕ್ಕೆ ಸನ್ಮಾನಿಸಿ ಗೌರವ ಸಮರ್ಪಣೆ ಮಾಡಲಾಯಿತು.
ಹನ್ನೆರಡು ವರ್ಷಗಳ ಬಳಿಕ ನಡೆಯುವ ಮಹಾ ಮಸ್ತಕಾಭೀಷೇಕ ಹಲವು ವಿಶೇಷತೆಗಳಿಂದ ಕೂಡಿದೆ. ಹುಬ್ಬಳ್ಳಿಯ ವರೂರಿನಲ್ಲಿ ನಡೆಯುವ ಮಸ್ತಕಾಭೀಷೇಕ 27 ಪದಾರ್ಥ, 18 ದಿಗಂಬರ ಆಚಾರ್ಯರು, ಶ್ವೇತಾಂಬರ, ದಿಗಂಬರ ಹಾಗೂ ಮೂರ್ತಿಪೂಜಕರು ಆಗಮಿಸುವ ಮೂಲಕ ಕಾರ್ಯಕ್ರಮ ಅದ್ದೂರಿಯಾಗಿ ನಡೆಸಲು ನಿರ್ಧಾರ ಮಾಡಲಾಗಿದೆ.
ಒಂಬತು ದೇಶಗಳ ಮೂಲಕ ಒಂಬತ್ತು ತರಹದ ಹೂವುಗಳಿಂದ ಪುಷ್ಪ ವೃಷ್ಟಿ ಮಾಡಲಾಗುತ್ತದೆ. ಸರ್ವಧರ್ಮ ಸಮ್ಮೇಳನದ ಜೊತೆಗೆ ಜೈನ್ ಸಾಹಿತ್ಯ ಸಮ್ಮೇಳನ ಕೂಡ ನಡೆಸಲಾಗುತ್ತದೆ. 24 ಆನೆ ಹಾಗೂ ಕುದುರೆ ಹಾಗೂ 108 ರಥದಿಂದ ಮಹಾ ಮೆರವಣಿಗೆ ಮಾಡಲಾಗುತ್ತದೆ ಎಂಬುವುದು ಮಹಾ ಮಸ್ತಕಾಭೀಷೇಕದ ವಿಶೇಷತೆಯಾಗಿದೆ.
ಇದಲ್ಲದೆ ಹತ್ತು ದಿನಗಳ ರಾಜ್ಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾದ ಕಲಾವಿದರು ಭಾಗಿಯಾಗಲಿದ್ದಾರೆ.
ರಾಷ್ಟ್ರಪತಿ ಸೇರಿದಂತೆ ನಾನಾ ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯಪಾಲರು, ಕೇಂದ್ರ ಸಚಿವರು ಭಾಗಿಯಾಗಲಿದ್ದಾರೆ.
ಭಗವಾನ್ ಪಾಶ್ರ್ವನಾಥ ತೀರ್ಥಂಕರ ಜೀವನದ ದರ್ಶನದ ಮೂಲಕ ಮಹಾ ಮಸ್ತಕಾಭೀಷೇಕದಿಂದ ಲೋಕಕಲ್ಯಾಣದ ಸಂಕಲ್ಪ ಮಾಡಲಾಗಿದ್ದು, ಬಹುದೊಡ್ಡ ಸಂಭ್ರಮಕ್ಕೆ ಮಹಾ ಮಸ್ತಕಾಭೀಷೇಕ ಸಾಕ್ಷಿಯಾಗಲಿದೆ ಎಂದು ಗುಣಧರನಂದಿ ಮಹಾರಾಜರು ಹಾಗೂ ಡಾ. ವೀರೇಂದ್ರ ಹೆಗ್ಗಡೆಯವರು ಮಾಹಿತಿ ನೀಡಿದರು.