ವಿದ್ಯಾಕಾಶಿ ಧಾರವಾಡ ಪ್ರತಿಭೆಗಳ ಖಣಜ. ಶೈಕ್ಷಣಿಕ, ಸಾಹಿತ್ಯ, ಸಂಗೀತ ಕ್ಷೇತ್ರದಂತೆ ಹಿಂದಿ ಚಿತ್ರರಂಗಕ್ಕೂ ಧಾರವಾಡ ದೊಡ್ಡ ಕೊಡುಗೆ ನೀಡಿದೆ.
ಇಲ್ಲಿನ ಕವಿ, ಸಾಹಿತಿಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದರೆ ಇದೀಗ ಸಿನಿಮಾ ರಂಗದಲ್ಲೂ ಧಾರವಾಡದ ಹೈದನೊಬ್ಬ ಹೆಸರು ಮಾಡುತ್ತಿದ್ದಾನೆ. ಅದರಲ್ಲೂ ಬಾಲಿವುಡ್‌ನಲ್ಲಿ ಧಾರವಾಡದ ವ್ಯಕ್ತಿ ದೊಡ್ಡಮಟ್ಟದ ಸಿನಿಮಾ ಮಾಡಿ ಗಮನಸೆಳೆದಿದ್ದಾನೆ.
ಧಾಖ್ ಸಿನೆಮಾದ ಟ್ರೈಲರ್ ನೋಡಿದ್ರೆ, ಇದೊಂದು ಪಕ್ಕಾ ಆ್ಯಕ್ಷನ್ ಚಿತ್ರ ಎಂದು ಗೊತ್ತಾಗುತ್ತದೆ. ಹೀಗೆ ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಹೀರೋ ಪಾತ್ರದ ವ್ಯಕ್ತಿ ಧಾರವಾಡದವರು.
ಧಾರವಾಡದ ಮಹ್ಮದ್ ಸಲೀಂ ಮುಲ್ಲಾನವರ ಎಂಬುವವರು ಇದೀಗ ಬಾಲಿವುಡ್‌ನಲ್ಲಿ ‘ಢಾಕ್’ ಎಂಬ ಸಿನಿಮಾದಲ್ಲಿ ನಾಯಕನ ನಟಕ ಪಾತ್ರದಲ್ಲಿ ಖದರ್ ಲುಕ್‌ನಲ್ಲಿ ಮಿಂಚಿದ್ದಾರೆ.
ಚಿತ್ರರಂಗದಲ್ಲಿ ಆಸಕ್ತಿ ಹೊಂದಿದ್ದ ಮಹ್ಮದ್ ಸಲೀಂ ಮೊದಲು ಛೋಟಾ ಮುಂಬೈ ಎಂಬ ಕನ್ನಡ ಸಿನಿಮಾದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಪಾತ್ರದಲ್ಲಿ ಮಿಂಚಿದ್ದರು. ಇದೀಗ ನೇರವಾಗಿ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿರುವ ಇವರು ನಾಯಕನ ಪಾತ್ರದಲ್ಲಿ ಮಿಂಚಿದ್ದಾರೆ.
ಈ ಚಿತ್ರ ನಾಳಿದ್ದು ಅಂದರೆ, ಸೆಪ್ಟೆಂಬರ್ 20 ರಂದು ದೇಶದಾದ್ಯಂತ ಬಿಡುಗಡೆಯಾಗಲಿದೆ. ಧಾರವಾಡದ ಸಂಗಮ, ಐನಾಕ್ಸ್, ಹುಬ್ಬಳ್ಳಿಯ ಪಿ ವಿ ಆರ್, ಸಿನಿಪೋಲಿಸ, ಅಪ್ಸರಾ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ.
ಧಾಖ್ ಚಿತ್ರವನ್ನು ಮುಂಬೈ ಸೇರಿದಂತೆ ಅನೇಕ ಕಡೆಗಳಲ್ಲಿ ಚಿತ್ರೀಕರಿಸಲಾಗಿದೆ. ನಟ ಯಶ್ ಅವರ ಜೊತೆ ರಾಜಧಾನಿ ಸಿನಿಮಾದಲ್ಲಿ ಸಹ ನಟಿಯಾಗಿ ನಟಿಸಿದ್ದ ಸೀನಾ ಶಾಬಾದಿ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಮಹ್ಮದ್ ಸಲೀಂ ಮುಲ್ಲಾನವರ ಅವರೇ ಚಿತ್ರವನ್ನು ನಿರ್ಮಿಸಿ ನಟಿಸಿದ್ದು, ಅನೀಶ್ ಬಾರೂದವಾಲೆ ನಿರ್ದೇಶಿಸಿದ್ದಾರೆ.
ಈ ಚಿತ್ರದ ಮತ್ತೊಂದು ವಿಶೇಷ ಎಂದರೆ, ಗಜನಿ ಖ್ಯಾತಿಯ ವಿಲನ್ ಪ್ರದೀಪ್ ಸಿಂಗ್ ರಾವತ್ ಸೇರಿದಂತೆ ಬಾಲಿವುಡ್‌ನ ಅನೇಕ ಹಿರಿಯ ನಟರು ಈ ಚಿತ್ರದಲ್ಲಿ ನಟಿಸಿದ್ದಾರೆ. ಸುನೀಲ್ ಸಿಂಗ್ ಕಲಾ ನಿರ್ದೇಶನ, ನಿಸಾರ್ ಅಕ್ತರ್ ಸಂಭಾಷಣೆ, ಮುಖೇಶ್ ಶರ್ಮಾ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಚಿತ್ರದಲ್ಲಿ ಐದು ಹಾಡುಗಳಿದ್ದು, ಜೈಕಾರ ಮತ್ತು ಪೀರ್ ಫಕಿರ್ ಹಾಡುಗಳು, ಯುಟ್ಯೂಬ್ ನಲ್ಲಿ ದೊಡ್ಡ ಸದ್ದು ಮಾಡಿವೆ.
ಒಟ್ಟಾರೆ ಧಾರವಾಡದ ಹೈದನೋರ್ವ ಇದೀಗ ಬಾಲಿವುಡ್‌ನಲ್ಲಿ ಮಿಂಚಲು ರೆಡಿಯಾಗಿದ್ದು, ಈ ಚಿತ್ರಕ್ಕೆ ಧಾರವಾಡ ಸೇರಿದಂತೆ ಕರ್ನಾಟಕದ ಎಲ್ಲ ಸಿನಿಪ್ರಿಯರು ಬೆಂಬಲ ಸೂಚಿಸಲೇಬೇಕಿದೆ. ಚಿತ್ರವನ್ನು ಗೆಲ್ಲಿಸಬೇಕಿದೆ.
ದೇಶದ 550 ಚಿತ್ರ ಮಂದಿರಗಳಲ್ಲಿ ಧಾಖ್ ಚಿತ್ರ ಪ್ರದರ್ಶನಗೊಳ್ಳಲಿದ್ದು, ಬಾಲಿವುಡ್ ನಲ್ಲಿ ಈ ಚಿತ್ರ ಸಂಚಲನ ಮೂಡಿಸಿದೆ. ಇದೇ ವೇಳೆ ನೇಪಾಳದ 50 ಮತ್ತು ದುಬೈದಲ್ಲಿನ 10 ಚಿತ್ರ ಮಂದಿರದಲ್ಲಿ ಧಾಖ್ ಸಿನೆಮಾ ಬಿಡುಗಡೆಯಾಗಲಿದೆ.
