ಬೆಂಗಳೂರಿನಲ್ಲಿಂದು ನಡೆದ ಮಹತ್ವದ ಬೆಳವಣಿಗೆಯೊಂದರಲ್ಲಿ ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿಯವರನ್ನು ವೀರಶೈವ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ, ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿನಯ ಕುಲಕರ್ಣಿಯವರನ್ನು ಸರ್ವಾನುಮತದಿಂದ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷ ಸ್ಥಾನದ ನೇಮಕ ಪತ್ರ ಕೊಟ್ಟ ಶಾಮನೂರು ಶಿವಶಂಕರಪ್ಪನವರು ವಿನಯ ಕುಲಕರ್ಣಿಯವರನ್ನು ಶಾಲು ಹೊದಿಸಿ ಅಭಿನಂದಿಸಿದರು. ಈಶ್ವರ ಖಂಡ್ರೆ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಲ್ಲ ಒಳ ಪಂಗಡಗಳನ್ನು ಸೇರಿಸಿಕೊಂಡು ಸಂಘಟನೆ ಕಟ್ಟುವ ದೊಡ್ಡ ಜವಾಬ್ದಾರಿ ವಿನಯ ಕುಲಕರ್ಣಿಯವರ ಮೇಲಿದೆ ಎಂದು ತಿಳಿಸಿದರು. ಲಿಂಗಾಯತ ಪ್ರತ್ತೈಕ ಧರ್ಮದ ಹೋರಾಟ, ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಮುಂಚೂಣಿ ನಾಯಕತ್ವ ವಹಿಸಿದ್ದ ವಿನಯ ಕುಲಕರ್ಣಿ ಹೆಗಲಿಗೆ ಮತ್ತೊಂದು ಮಹತ್ತರ ಜವಾಬ್ದಾರಿ ಹೊರಿಸಲಾಗಿದೆ.
