Download Our App

Follow us

Search
Close this search box.
Home » Uncategorized » ಧಾರವಾಡ ಜಿಲ್ಲೆ ಸೇರಿದಂತೆ ರಾಜ್ಯದಾಧ್ಯಂತ 1300 ಅನಧಿಕೃತ ಶಾಲೆಗಳಿಗೆ ಬೀಗ. ಶಾಲೆ ಮುಚ್ಚುವಂತೆ ಶಿಕ್ಷಣ ಇಲಾಖೆ ಆದೇಶ.

ಅಂಬೇಡ್ಕರ್ ನಮಗೆ ವ್ಯಸನ ಅಲ್ಲ, ನಿತ್ಯ ಸ್ಮರಣೆ. ಅಮಿತ್ ಶಾ ಗೆ ಬಹಿರಂಗ ಪತ್ರ ಬರೆದ ಸಿದ್ದರಾಮಯ್ಯ

ಕೇಂದ್ರ ಗೃಹ ಸಚಿವರಾದ ಅಮಿತ್   ಶಾ ಅವರಿಗೊಂದು ಬಹಿರಂಗ ಪತ್ರ”

ಸನ್ಮಾನ್ಯ ಅಮಿತ್ ಶಾ ಅವರೇ,  

ಮೊದಲಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಭಾರತೀಯ ಜನತಾ ಪಕ್ಷದ ಅಂತರಂಗದ ಅಭಿಪ್ರಾಯವನ್ನು ಬಹಿರಂಗವಾಗಿ ಧೈರ್ಯದಿಂದ ದೇಶದ ಮುಂದೆ ತೆರೆದಿಟ್ಟದ್ದಕ್ಕಾಗಿ ಮತ್ತು ಕೊನೆಗೂ ನಿಮ್ಮ ಜೀವಮಾನದಲ್ಲಿ ಒಂದು ಸತ್ಯವನ್ನಾದರೂ ಹೇಳಿದ್ದಕ್ಕೆ ನಿಮ್ಮನ್ನು ಅಭಿನಂದಿಸುತ್ತೇನೆ.

ನಿಮ್ಮ ಮಾತಿನಿಂದ ನಮಗೆ ಆಶ್ಚರ್ಯವಾಗಿಲ್ಲ, ನಮಗೆ ಇದು ಗೊತ್ತಿತ್ತು. ಸಂಸತ್ ನಲ್ಲಿ (18-12-2024) ಆಡಿದ ನಿಮ್ಮ ಮಾತಿನಿಂದ ಇಡೀ ದೇಶಕ್ಕೆ ನಿಮ್ಮ ಅಂತರಂಗದ ಅರಿವಾಗಿದೆ.. ಬಾಬಾಸಾಹೇಬ್ ಅವರು ಕೊಟ್ಟ ಸಂವಿಧಾನದಡಿಯಲ್ಲಿಯೇ ಕಾರ್ಯನಿರ್ವಹಿಸುತ್ತಿರುವ ಸಂಸತ್ ನಲ್ಲಿ ನಿಂತು ಅವರ ಸ್ಮರಣೆಯನ್ನು ವ್ಯಸನ ಎಂದು ತುಚ್ಛೀಕರಿಸುವ ನಿಮ್ಮ ಧಾಷ್ಟ್ರಕ್ಕೆ ಶಹಭಾಸ್ ಅನ್ನಲೇಬೇಕು..

ಅಮಿತ್ ಶಹಾ ಅವರೇ, ‘’ಬಾಬಾಸಾಹೇಬರ ಬಗ್ಗೆ ತಮಗೆ ಅಪಾರ ಅಭಿಮಾನ ಇದೆ, ಗೌರವ ಇದೆ, ನನ್ನ ಮಾತುಗಳನ್ನು ತಿರುಚಲಾಗಿದೆ’’ ಎಂದೆಲ್ಲ ಸ್ಪಷ್ಟೀಕರಣ ಕೊಟ್ಟು ಆತ್ಮವಂಚನೆ ಮಾಡಿಕೊಳ್ಳಬೇಡಿ. ಅದನ್ನು ಸಮರ್ಥಿಸಿಕೊಂಡು ದೇಶವನ್ನು ಎದುರಿಸಿ.

ಅಂಬೇಡ್ಕರ್ ನಮಗೆ ವ್ಯಸನ ಅಲ್ಲ, ನಿತ್ಯ ಸ್ಮರಣೆ. ನಮ್ಮ ಉಸಿರು ಇರುವವರೆಗೆ, ಈ ಭೂಮಿಯಲ್ಲಿ ಸೂರ್ಯ-ಚಂದ್ರ ಇರುವವರೆಗೆ ಅಂಬೇಡ್ಕರ್ ಸ್ಮರಣೆ ಇರಲಿದೆ. ನೀವು ತುಚ್ಛೀಕರಿಸಿದಷ್ಟೂ ಪುಟಿದು ಪುಟಿದು ಮೇಲೆದ್ದು ಬಂದು ಅವರು ನಮ್ಮ ಮುನ್ನಡೆಯ ಹಾದಿಗೆ ಬೆಳಕಾಗುತ್ತಾರೆ.

ನಿಮ್ಮ ದುರಹಂಕಾರದ ಮಾತಿಗೆ ನಿಮ್ಮ ಬೆನ್ನಹಿಂದಿರುವ ಚೇಲಾಗಳು ಮೇಜುಕುಟ್ಟಿ ಸಂಭ್ರಮಿಸಿರಬಹುದು. ಆದರೆ ಅಂಬೇಡ್ಕರ್ ಅವರಿಂದಾಗಿ ಸಮಾನತೆ ಮತ್ತು ಘನತೆಯ ಬದುಕನ್ನು ಪಡೆದಿರುವ ದೇಶದ ಕೋಟ್ಯಂತರ ಜನ ನಿಮಗೆ ಛೀಮಾರಿ ಹಾಕುತ್ತಿದ್ದಾರೆ ಎನ್ನುವುದು ತಿಳಿದಿರಲಿ.

 

ಅಂಬೇಡ್ಕರ್ ಎಂಬ ಮನುಷ್ಯ ಈ ಭೂಮಿಯಲ್ಲಿ ಹುಟ್ಟದೆ ಇರುತ್ತಿದ್ದರೆ, ನನಗೆ ಮುಖ್ಯಮಂತ್ರಿಯಾಗುವ ಅವಕಾಶವೇ ಬರುತ್ತಿರಲಿಲ್ಲ, ನಾನು ಊರಲ್ಲಿ ದನ-ಕುರಿ ಮೇಯಿಸಿಕೊಂಡು ಇರಬೇಕಾಗುತ್ತಿತ್ತು..

ನಮ್ಮ ಪಕ್ಷದ ಹಿರಿಯ ನಾಯಕರಾದ ಸನ್ಮಾನ್ಯ ಮಲ್ಲಿಕಾರ್ಜುನ ಖರ್ಗೆಯವರು ರಾಜಕೀಯ ಕ್ಷೇತ್ರದಲ್ಲಿ ಉನ್ನತ ಸ್ಥಾನಗಳನ್ನು ಪಡೆದು ಎಐಸಿಸಿಯ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುತ್ತಿರಲಿಲ್ಲ, ಕಲಬುರ್ಗಿಯ ಯಾವುದಾದರೂ ಕಾರ್ಖಾನೆಯಲ್ಲಿ ಕಾರ್ಮಿಕರಾಗಿರುತ್ತಿದ್ದರು.

ಈ ವಾಸ್ತವ ಸದಾ ನಮ್ಮ ನೆನಪಲ್ಲಿರುತ್ತದೆ. ನೀವು ಹೇಳುವ ವ್ಯಸನ ನಮ್ಮ ಪಾಲಿನ ಅಂಬೇಡ್ಕರ್ ಸ್ಮರಣೆ, ನಮ್ಮನ್ನೆಲ್ಲ ಇಲ್ಲಿಗೆ ತಂದು ನಿಲ್ಲಿಸಿ ನಮಗೆ ಸ್ಥಾನಮಾನ, ಗೌರವ ಮತ್ತು ಜನರ ಸೇವೆ ಮಾಡುವ ಅವಕಾಶವನ್ನು ಕೊಟ್ಟಿದೆ ಎನ್ನುವುದನ್ನು ನಾವು ಮರೆತಿಲ್ಲ.

ನಾನು ಮಾತ್ರ ಅಲ್ಲ, ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಅವರು ಕೊಟ್ಟಿರುವ ಸಂವಿಧಾನ ಇಲ್ಲದೆ ಇರುತ್ತಿದ್ದರೆ ನೀವು ಕೂಡಾ ಗೃಹಸಚಿವರಾಗಿ ಬದುಕು ಕೊಟ್ಟ ಮಹಾತ್ಮನನ್ನೇ ತುಚ್ಛೀಕರಿಸುವ ಅವಕಾಶ ನಿಮಗೆ ಸಿಗುತ್ತಿರಲಿಲ್ಲ.

ನೀವು ನಿಮ್ಮೂರಿನಲ್ಲಿ ಎಲ್ಲಾದರೂ ಗುಜರಿ ವ್ಯಾಪಾರ ಮಾಡಿಕೊಂಡು ಇರಬೇಕಾಗುತ್ತಿತ್ತು, ದೇಶದ ಪ್ರಧಾನಿ ಮತ್ತು ನಿಮ್ಮ ಸಹದ್ಯೋಗಿ ನರೇಂದ್ರ ಮೋದಿ ಅವರು ಕೂಡಾ ರೈಲ್ವೇ ಸ್ಟೇಷನ್ ನಲ್ಲಿ ಚಹಾ ಮಾರಿಕೊಂಡೇ ಇರಬೇಕಾಗಿತ್ತೋ ಏನೋ? ಅವರಿಗೂ ಪ್ರಧಾನಿಯಾಗುವ ಅವಕಾಶವೇ ಸಿಗುತ್ತಿರಲಿಲ್ಲ. ಇದನ್ನು ಪ್ರಧಾನಿಯವರೂ ಒಪ್ಪಿಕೊಳ‍್ಳಬಹುದು ಎಂದು ನಂಬಿದ್ದೇನೆ, ನೀವೂ ಒಪ್ಪಿಕೊಂಡು ಬಿಡಿ.

ಅಮಿತ ಶಾ ಅವರೇ, ಇತಿಹಾಸವನ್ನು ಓದಿರುವ ನಮ್ಮಂತಹವರಿಗೆ ನಿಮ್ಮೊಳಗಿನ ಅಂಬೇಡ್ಕರ್ ದ್ವೇಷ ಹೊಸದಲ್ಲ. ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಅವರು ಬರೆದಿರುವ ದೇಶದ ಸಂವಿಧಾನವನ್ನು ಅವರು ಬದುಕಿರುವಾಗಲೇ ನಿಮ್ಮ ಮಾತೃಸಂಸ್ಥೆಯಾದ ಆರ್ ಎಸ್ ಎಸ್ ಯಾಕೆ ತಿರಸ್ಕರಿಸಿತ್ತು?

ಆರ್ ಎಸ್ ಎಸ್ ನಾಯಕರಾಗಿದ್ದ ಹೆಡಗೆವಾರ್, ಗೋಲ್ವಾಲ್ಕರ್ ಮತ್ತು ಸಾವರ್ಕರ್ ಸಂವಿಧಾನವನ್ನು ವಿರೋಧಿಸಿ ನೀಡಿರುವ ಹೇಳಿಕೆಗಳೇನು ಎನ್ನುವ ವಿವರಗಳೆಲ್ಲ ಇತಿಹಾಸದ ಪುಟಗಳಲ್ಲಿ ಇವೆ. ನಿಮ್ಮ ಸುಳ್ಳುಗಳು ಮತ್ತು ಆತ್ಮವಂಚನೆಯ ನಡವಳಿಕೆಗಳಿಂದ ಅದನ್ನು ಮರೆಮಾಚಬಹುದು, ಆದರೆ ಅಳಿಸಿಹಾಕಲಾಗುವುದಿಲ್ಲ ಎನ್ನುವುದು ನೆನಪಿರಲಿ. ಆ ಅಭಿಪ್ರಾಯವನ್ನೇ ನೀವು ಸಂಸತ್ ನಲ್ಲಿ ಆಡಿದ್ದೀರಿ.

ನಿಮ್ಮ ಮಾತಿನ ಧಾಟಿಯಲ್ಲಿಯೇ ಪ್ರತಿಕ್ರಿಯಿಸುತ್ತೇನೆ. ನಿಮ್ಮ ಪಕ್ಷ ಮತ್ತು ಅದರ ಹಿಂದಿರುವ ಪರಿವಾರಕ್ಕೆ ಇತ್ತೀಚೆಗೆ ಮೋದಿ…ಮೋದಿ.. ಮೋದಿ ಎಂದು ಹೇಳುವುದು ಒಂದು ವ್ಯಸನ ಆಗಿದೆ. ಮೋದಿಯವರ ಬದಲಿಗೆ ಅಷ್ಟು ಬಾರಿ ದೇವರ ನಾಮ ಸ್ಮರಣೆ ಮಾಡಿದ್ದರೆ ಏಳು ಜನ್ಮದಲ್ಲಿ ಮಾತ್ರ ಅಲ್ಲ, ನೂರು ಜನ್ಮದಲ್ಲಿಯೂ ನಿಮಗೆ ಸ್ವರ್ಗವೇ ಸಿಗುತ್ತಿತ್ತು, ಕೇವಲ ಅಧಿಕಾರದಲ್ಲಿ ಉಳಿಯಲಿಕ್ಕಾಗಿ ಮಾಡಿರುವ ಪಾಪಕೃತ್ಯಗಳಿಗೆ ಕ್ಷಮೆಯೂ ಸಿಗುತ್ತಿತ್ತು. 

 

ವಿಶ್ವಾಸಪೂರ್ವಕವಾಗಿ….

ಇಂತೀ..

ಸಿದ್ದರಾಮಯ್ಯ

Karnataka Files
Author: Karnataka Files

Leave a Comment

RELATED LATEST NEWS

Top Headlines

ಬ್ರಷ್ಟಾಚಾರ ಬಯಲಿಗೆಳಿದಿದ್ದ ಪತ್ರಕರ್ತನ ಭೀಕರ ಕೊಲೆ

ಛತ್ತೀಸ್‌ಗಢದಲ್ಲಿ ಪತ್ರಕರ್ತ ಮುಖೇಶ್ ಚಂದ್ರಕರ್ ಅವರು ರಸ್ತೆ ನಿರ್ಮಾಣದಲ್ಲಿನ ಭ್ರಷ್ಟಾಚಾರವನ್ನು ಬಯಲಿಗೆಳೆದ ಕಾರಣ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.  56 ಕೋಟಿ ಮೌಲ್ಯದ ರಸ್ತೆಯನ್ನು 102 ಕೋಟಿ

Live Cricket

error: Content is protected !!