ಹಾವೇರಿ ಗದಗ ಲೋಕಸಭಾ ಕ್ಷೇತ್ರ ಇದೀಗ ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ. ಕೆ ಎಸ್ ಈಶ್ವರಪ್ಪನವರು ಈ ಕ್ಷೇತ್ರವನ್ನು ತಮ್ಮ ಮಗನಿಗಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಅನ್ನುವ ಮಾತು ಕೇಳಿ ಬರುತ್ತಿವೆ. ಕೆ ಎಸ್ ಈಶ್ವರಪ್ಪನವರ ಮಗ ಕಾಂತೇಶ್ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗುತ್ತಾರೆ ಎಂದು ಬಿಜೆಪಿ ಮೂಲಗಳಲ್ಲಿ ಚರ್ಚೆಯಾಗುತ್ತಿವೆ. ಇದಕ್ಕೆ ಪುಷ್ಟಿ ನೀಡುವಂತೆ ನಾಳೆ ಕೆ ಎಸ್ ಈಶ್ವರಪ್ಪನವರ ಕುಟುಂಬ ಹಾವೇರಿಯ ಸಿಂದಗಿ ಮಠದಲ್ಲಿ ರುದ್ರ ಹೋಮ ಹಮ್ಮಿಕೊಂಡಿದೆ. ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ರ ವರೆಗೆ ರುದ್ರ ಹೋಮ ನಡೆಯಲಿದೆ. ರುದ್ರ ಹೋಮ ನಡೆಸುವ ಮೂಲಕ ಸಮರಕ್ಕೆ ತಯಾರಿ ಆರಂಭಿಸಲಿದ್ದಾರೆ ಎನ್ನಲಾಗಿದೆ. ಹಾವೇರಿ ಗದಗ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಲು ಬಿಜೆಪಿಯ ಯುವ ಮುಖಂಡ ಶರಣು ಅಂಗಡಿ ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಿದ್ದು, ಮತ್ತೊಂದೆಡೆ ಕೆ ಎಸ್ ಈಶ್ವರಪ್ಪನವರ ಮಗ ಕಾಂತೇಶ್ ಟಿಕೇಟ್ ಪಡೆಯಲು ಪ್ರಭಲ ಪೈಪೋಟಿ ನಡೆಸಿದ್ದಾರೆ. ಹಾಲಿ ಸಂಸದರಾಗಿರುವ ಶಿವಕುಮಾರ ಉದಾಸಿ, ಪಕ್ಷದ ಸಂಘಟನೆಯಿಂದ ದೂರ ಸರಿದಿದ್ದು, ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದಾರೆ.
