ಬೆಂಗಳೂರು : 21 ಹಾಲಿ – 16 ಮಾಜಿ – 11 ಜೆಡಿಎಸ್ : ಲೋಕ – ಶಾಕಾ..? – ಏನಿದು ಅಂತ ಯೋಚಿಸ್ತಾ ಇದ್ದೀರಾ..? ಇದು ಕಾಂಗ್ರೆಸ್ ಬಿಜೆಪಿ ಹಾಗೂ ಜೆಡಿಎಸ್ ಗೆ ನೀಡುತ್ತಿರುವ ಶಾಕ್ ಸೂತ್ರ. ಆಪರೇಷನ್ ಎಕ್ಸಪರ್ಟ್ ಬಿಜೆಪಿಗೆ ಕೊಡುತ್ತಿರೋ ತಿರುಗೇಟಿನ ತಿರುಳಿದು.
ವಿಪಕ್ಷ ನಾಯಕ ಹಾಗೂ ತನ್ನ ರಾಜ್ಯಧ್ಯಕ್ಷನ ಆಯ್ಕೆ ಮಾಡುವ ಕೆಲಸವನ್ನೇ ಮಾಡದ ಬಿಜೆಪಿ ಆಪರೇಷನ್ ಕಮಲದ ಬೆದರಿಕೆ ಒಡ್ಡಿತ್ತು. ಇದರಿಂದ ಎಚ್ಚೆತ್ತ ಕಾಂಗ್ರೆಸ್ ಸದ್ದೇ ಮಾಡದೇ ಲೋಕಸಭಾ ಚುನಾವಣೆಗಾಗಿ ಆಪರೇಷನ್ ಹಸ್ತಕ್ಕೆ ಚಾಲನೆ ಕೊಟ್ಟು ಬಹುತೇಕ ಮುಗಿಸುತ್ತಿದ್ದಾರೆ.
ಬಿಜೆಪಿಯ 21 ಹಾಗೂ ಜೆಡಿಎಸ್ ನ 11 ಹಾಲಿ ಶಾಸಕರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಳ್ಳಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ – ಜೆಡಿಎಸ್ ನಿಂದ ಆಪರೇಷನ್ ಆಗಿ ಹೋಗಿರುವ ಮೂರು ಶಾಸಕರು ಸೇರಿದಂತೆ ಒಟ್ಟು 21 ಬಿಜೆಪಿ ಮತ್ತು 11 ಜೆಡಿಎಸ್ ಶಾಸಕರು ಮ್ಯಾಚ್ ಫಿಕ್ಸಿಂಗ್ ಗೆ ಮುಂದಾಗಿದ್ದಾರೆ. ಇದರಲ್ಲಿ ಬೆಂಗಳೂರಿನ ಬಿಜೆಪಿಯ ಇಬ್ಬರು ಒಕ್ಕಲಿಗ ಶಾಸಕರಿದ್ದಾರೆ ಎನ್ನಲಾಗಿದೆ.
ಏನು ಆಫರ್ :- ಲೋಕಸಭಾ ಚುನಾವಣೆಯಲ್ಲಿ ಮ್ಯಾಚ್ ಫಿಕ್ಸಿಂಗ್ ಬಿಜೆಪಿ ಹಾಗೂ ಜೆಡಿಎಸ್ ಶಾಸಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಹೆಚ್ಚು ಲೀಡ್ ಪಡೆಯುವಂತೆ ನೋಡಿಕೊಳ್ಳಬೇಕು. ನೋಡಿಕೊಳ್ಳುವಲ್ಲಿ ಯಶಸ್ವಿಯಾಗುವ ಬಿಜೆಪಿ ಶಾಸಕರಿಗೆ ಮುಂದಿನ ನಾಲ್ಕು ವರ್ಷ ಅನುದಾನಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು.
ಮಾಜಿಗಳಿಗೆ ಶೆಟ್ಟರ್ ಲೀಡರ್ ಶಿಪ್ :- ಬಿಜೆಪಿಯ 16 ಮಾಜಿ ಶಾಸಕರು ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರಲು ಸಿದ್ಧತೆ ನಡೆದಿದೆ. ಕ್ಷೇತ್ರದ ಕೆಲವು ಕೆಲಸಗಳ ಜೊತೆಗೆ ಬೇರೊಂದು ಕ್ಷೇತ್ರದಲ್ಲಿ ಟಿಕೆಟ್ ಕೊಡಿಸುವ ಆಫರ್ ಜೊತೆಗೆ ಮಾಜಿಗಳ ಆಪರೇಷನ್ ನಡೆದಿದೆ ಎನ್ನಲಾಗಿದೆ.
ಈ ಎಲ್ಲಾ ಕಾರಣಗಳಿಂದಾಗಿ ಕಾಂಗ್ರೆಸ್ ಆತ್ಮವಿಶ್ವಾಸ ಹೆಚ್ಚಾಗಿದೆ. 20 ರಿಂದ 22 ಕ್ಷೇತ್ರ ಗೆಲ್ಲುವ ಹುಮ್ಮಸ್ಸು ತೋರುತ್ತಿದೆ ಕಾಂಗ್ರೆಸ್. ಇದೇ ಕಾರಣಕ್ಕೆ ಏನೋ ಇನ್ನು 6 ತಿಂಗಳಲ್ಲಿ ಬಿಜೆಪಿಯೇ ಇರೋದಿಲ್ಲ ಅಂತ ಸಚಿವ ಪ್ರಿಯಾಂಕ ಖರ್ಗೆ ಅಬ್ಬರಿಸುತ್ತಿದ್ದಾರೆ.