ಭಾರತಕ್ಕೆ ಮತ್ತೆ ಈರುಳ್ಳಿ ಕೊರತೆ ಎದುರಾಗಲಿದೆ. ಈರುಳ್ಳಿ ಬೆಲೆ ಏರಿಕೆಯಿಂದಾಗಿ ಗ್ರಾಹಕರಿಗೆ ಕಣ್ಣೀರು ತರಿಸಲಿದೆ. ಇನ್ನೂರು ರೂಪಾಯಿ ಪ್ರತಿ ಕೆಜಿ ತಲುಪಿದ್ದ ಕೆಂಪು ಸುಂದರಿ ಟಮೇಟೋ, ಇದೀಗ ಕೈಗೆಟಕುವ ದರದಲ್ಲಿ ಸಿಗುತ್ತಿರುವ ಬೆನ್ನಲ್ಲೇ ಈರುಳ್ಳಿ ದರ ಇದೀಗ ಮಾರುಕಟ್ಟೆಯಲ್ಲಿ ಹೆಚ್ಚಾಗಿದೆ.
ಈರುಳ್ಳಿ ಬೆಲೆ ಏರಿಕೆಗೆ ಕಾರಣ ಏನು ?
ಭಾರತದಲ್ಲಿ ಪ್ರತಿ ತಿಂಗಳು 13 ಲಕ್ಷ ಟನ್ ಈರುಳ್ಳಿ ಬಳಕೆಗೆ ಬೇಕಾಗುತ್ತದೆ. ಒಟ್ಟು 1.4 ಮಿಲಿಯನ್ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳಯಲಾಗುತ್ತದೆ. 1.4 ಮಿಲಿಯನ್ ಹೆಕ್ಟೇರ್ ನಲ್ಲಿ ವರ್ಷಕ್ಕೆ 24 ಮಿಲಿಯನ್ ಮೆಟ್ರಿಕ್ ಟನ್ ಈರುಳ್ಳಿ ಬೆಳೆಯಲಾಗುತ್ತದೆ. ಈರುಳ್ಳಿ ಬೆಳೆಯುವಲ್ಲಿ ಭಾರತ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದ್ದು ಶೇಕಡಾ 70 ರಷ್ಟು ಈರುಳ್ಳಿಯನ್ನು ಕೇವಲ ನಾಲ್ಕು ರಾಜ್ಯಗಳಲ್ಲಿ ಬೆಳೆಯಲಾಗುತ್ತದೆ. ಮಹಾರಾಷ್ಟ್ರ, ಮಧ್ಯ ಪ್ರದೇಶ, ಕರ್ನಾಟಕ, ಗುಜರಾತ್ ರಾಜ್ಯದಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬೆಳೆಯಲಾಗುತ್ತದೆ. ಮಹಾರಾಷ್ಟ್ರದಲ್ಲಿ 13.3 ಮಿಲಿಯನ್ ಮೆಟ್ರಿಕ್ ಟನ್, ಮಧ್ಯ ಪ್ರದೇಶದಲ್ಲಿ 4.7 ಮಿಲಿಯನ್ ಮೆಟ್ರಿಕ್ ಟನ್, ಕರ್ನಾಟಕದಲ್ಲಿ 2.7 ಮಿಲಿಯನ್ ಮೆಟ್ರಿಕ್ ಟನ್, ಗುಜರಾತನಲ್ಲಿ 2.5 ಮಿಲಿಯನ್ ಮೆಟ್ರಿಕ್ ಟನ್ ಈರುಳ್ಳಿ ಬೆಳೆಯಲಾಗುತ್ತದೆ. ಆದರೆ ಕೆಲವು ಕಡೆ ಸುರಿದ ಅಕಾಲಿಕ ಮಳೆ ಹಾಗೂ ಸರಿಯಾದ ಸಮಯಕ್ಕೆ ಮಳೆ ಆಗದ ಪರಿಣಾಮ ಈರುಳ್ಳಿ ಉತ್ಪಾದನೆ ಕಡಿಮೆಯಾಗಿದೆ. ಹೀಗಾಗಿ ಈರುಳ್ಳಿ ದರ ಪ್ರತಿ ಕೆಜಿಗೆ ನೂರರ ಗಡಿ ದಾಟುವ ಲಕ್ಷಣಗಳಿವೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.