ಬರದ ಭೀತಿಯ ನಡುವೆ ನಾಳೆಯಿಂದ ನಾಲ್ಕು ದಿನಗಳ ಕಾಲ ಧಾರವಾಡದ ಕೃಷಿ ವಿಶ್ವ ವಿಧ್ಯಾಲಯದಲ್ಲಿ ಕೃಷಿ ಮೇಳ ಆರಂಭಗೊಳ್ಳಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೃಷಿ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಸುಸ್ಥಿರ ಕೃಷಿಗಾಗಿ ಸಿರಿ ಧಾನ್ಯಗಳು ಎಂಬ ಶೀರ್ಷಿಕೆಯಡಿ ಕೃಷಿ ಮೇಳ ನಡೆಯಲಿದೆ.
ನಾಲ್ಕು ದಿನಗಳ ಕಾರ್ಯಕ್ರಮದ ಪಟ್ಟಿ
ನಾಳೆ ಅಂದರೆ ಸೆಪ್ಟೆಂಬರ್ 9 ರಂದು ಬೆಳಿಗ್ಗೆ 11-30 ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದು, ದಿನಾಂಕ 10 ರಂದು ಬೀಜ ಮೇಳದ ಉದ್ಘಾಟನೆ ನಡೆಯಲಿದೆ. ದಿನಾಂಕ 11 ರಂದು ಪೌಷ್ಟಿಕತೆ ಮತ್ತು ಆರ್ಥಿಕ ಭದ್ರತೆಗೆ ಸಿರಿ ಧಾನ್ಯಗಳು ಕುರಿತು ಕಾರ್ಯಕ್ರಮ ನಡೆಯಲಿದೆ. ದಿನಾಂಕ 12 ರಂದು ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ.
ನಾಲ್ಕು ದಿನಗಳ ಕಾಲ ನಡೆಯಲಿರುವ ಕೃಷಿ ಮೇಳದಲ್ಲಿ, ಹೈಟೆಕ್ ತೋಟಗಾರಿಕೆ, ಯಂತ್ರೋಪಕರಣ, ಸುಧಾರಿತ ತಂತ್ರಜ್ಞಾನ, ವಿಸ್ಮಯಕಾರಿ ಕೀಟ ಹತೋಟಿ, ಫಲಪುಷ್ಪ ಹಾಗೂ ಜಾನುವಾರು ತಳಿಗಳ ಪ್ರದರ್ಶನ ನಡೆಯಲಿದೆ. ಇದರ ಜೊತೆಗೆ ರೈತ ವಿಜ್ಞಾನಿಗಳು ಕಂಡು ಹಿಡಿದಿರುವ ಆವಿಷ್ಕಾರಗಳು ಗಮನ ಸೆಳೆಯಲಿವೆ. ಮಣ್ಣಿನ ಫಲವತ್ತತೆ, ಸಾವಯವ ಕೃಷಿ ಬಗ್ಗೆ ವಿಜ್ಞಾನಿಗಳು ಮಾಹಿತಿ ನೀಡಲಿದ್ದಾರೆ. ಅಲ್ಲದೆ ಸಾಧಕ ರೈತರ ಜೊತೆ ಸಂವಾದ ಸಹ ನಡೆಯಲಿದೆ.
ಕೃಷಿ ವಸ್ತು ಪ್ರದರ್ಶನದಲ್ಲಿ 50 ಜಾನುವಾರು ಪ್ರದರ್ಶನ ಮಳಿಗೆ, 24 ಯಂತ್ರೋಪಕರಣ ಮಳಿಗೆ, 351 ಸಾಮಾನ್ಯ ಮಳಿಗೆ, 198 ಹೈಟೆಕ್ ಮಳಿಗೆ, 40 ಆಹಾರ ಮಳಿಗೆಗಳನ್ನು ಹಾಕಲಾಗಿದೆ. ಕೃಷಿ ವಿಶ್ವ ವಿಧ್ಯಾಲಯ ಸಂಶೋಧಿಸಿರುವ 24 ತಳಿಗಳು ಗಮನ ಸೆಳೆಯಲಿವೆ.
ಕೃಷಿ ಮೇಳದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ 7 ಪುರುಷರು, 7 ಮಹಿಳೆಯರು ಸೇರಿ ಒಟ್ಟು 14 ಕೃಷಿಕರನ್ನು 2023 ನೇ ಸಾಲಿನ ಶ್ರೇಷ್ಟ ಕೃಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕೃಷಿ ಮೇಳದ ಯಶಸ್ವಿಗೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಸುಮಾರು 20 ಲಕ್ಷ ಜನ ಕೃಷಿ ಮೇಳಕ್ಕೆ ಆಗಮಿಸಬಹುದು ಎಂದು ಅಂದಾಜಿಸಲಾಗಿದೆ.
