ಕಿಮ್ಸ್ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷತನದಿಂದ ಹುಟ್ಟಿದ ಮಗು ಅದಲು ಬದಲಾದ ಘಟನೆ ಬೆಳಕಿಗೆ ಬಂದಿದೆ. ಬುಧವಾರ ಹಾಲುಣಿಸುವ ತಾಯಿಗೆ ತನ್ನ ಮಗುವಿನ ಬದಲಿಗೆ ಬೇರೆ ಮಗುವನ್ನು ನೀಡಲಾಗಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಂಗಿ ಗ್ರಾಮದ ಗರ್ಭಿಣಿ ಮುತ್ತವ್ವ ಪೂಜಾರ ಎಂಬುವವರನ್ನು ಹೆರಿಗೆಗೆಂದು ಕಿಮ್ಸ್ ಆಸ್ಪತ್ರೆಗೆ ಧಾಖಲಿಸಲಾಗಿತ್ತು. ಮುತ್ತವ್ವ, ಸಪ್ಟೆಂಬರ್ 3 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗು ಕಡಿಮೆ ತೂಕ ಹೊಂದಿದ್ದರಿಂದ ನವಜಾತ ಶಿಶುವನ್ನು, ಕಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (NICU) ಇಡಲಾಗಿತ್ತು. ಮತ್ತು ತಾಯಿಯನ್ನು ICU ನಲ್ಲಿ ಇಡಲಾಗಿತ್ತು. ಮಗುವಿನ ಆರೋಗ್ಯ ಸುಧಾರಿಸುವವರೆಗೆ ಮಗುವನ್ನು ಎರಡು ವಾರಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಇಟ್ಟು, ಎರಡು ವಾರಗಳ ನಂತರ ಮುತ್ತವ್ವ ಆಸ್ಪತ್ರೆಯಿಂದ ಬಿಡುಗಡೆಯಾಗುವ ಹೊತ್ತಿಗೆ ಆಕೆಯ ಕೈಗೆ ಗಂಡು ಮಗುವಿನ ಬದಲು ಹೆಣ್ಣು ಮಗುವನ್ನು ಕೊಡಲಾಗಿತ್ತು.
ಹೆಣ್ಣು ಮಗುವನ್ನು ಕೈಗೆ ಕೊಟ್ಟ ಮೇಲೆ ಗೊಂದಲಕ್ಕಿಡಾದ ಮುತ್ತವ್ವ ಮತ್ತು ಆಕೆಯ ಕುಟುಂಬಸ್ಥರು, ಮಗು ಬದಲಾದ ಬಗ್ಗೆ ಆಸ್ಪತ್ರೆ ಸಿಬ್ಬಂದಿಯನ್ನು ಕೇಳಿದ್ದಾರೆ. ಆದರೆ ಕಿಮ್ಸ್ ಆಸ್ಪತ್ರೆ ಸಿಬ್ಬಂದಿಯಿಂದ ಸಮರ್ಪಕ ಉತ್ತರ ಬಾರದಿದ್ದಾಗ, ಮುಟ್ಟವ್ವಳ ಪಾಲಕರು ಸಂಶಯಗೊಂಡಿದ್ದಾರೆ. ಮುತ್ತವ್ವಳ ಕುಟುಂಬಸ್ಥರು ಪ್ರತಿಭಟನೆ ಮಾಡುವದಾಗಿ ಎಚ್ಚರಿಸಿದ ಬಳಿಕ, ಕಿಮ್ಸ್ ಆಸ್ಪತ್ರೆಯ ಅಧಿಕ್ಷಕ ಡಾ. ಅರುಣಕುಮಾರ ಮಧ್ಯ ಪ್ರವೇಶಿಸಿದ್ದಾರೆ. ಮಗು ಅದಲು ಬದಲಾದ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಮುತ್ತವ್ವ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ ಅನ್ನೋದು ಖಾತ್ರಿಯಾದ ಬಳಿಕ, ಡಾ. ಅರುಣಕುಮಾರ, ಗಂಡು ಮಗುವನ್ನು ಪತ್ತೆ ಹಚ್ಚಿ, ಆಕೆಯ ಕೈಗೆ ಒಪ್ಪಿಸಿದ್ದಾರೆ. ಅದಲು ಬದಲಾದ ನವಜಾತ ಶಿಶುಗಳು ಒಂದೇ ದಿನಕ್ಕೆ ಜನನವಾಗಿದ್ದು, ಜನನವಾದ ಬಳಿಕ ತೀವ್ರ ನಿಗಾ ಘಟಕದಲ್ಲಿ ಇಡುವಾಗ ಮಗುವಿನ ಕೈಗೆ ಹಾಗೂ ತಾಯಿಯ ಕೈಗೆ ಒಂದೇ ನಂಬರಿನ ಬ್ಯಾಂಡ ಕಟ್ಟುತ್ತಾರೆ. ಆದ್ರೆ ಬ್ಯಾಂಡ ನಾಪತ್ತೆಯಾಗಿದ್ದರಿಂದ ಗೊಂದಲವಾಗಿದೆ ಎಂದು ಅಧಿಕ್ಷಕರು ಪಾಲಕರಿಗೆ ಹೇಳಿದ್ದಾರೆ. ಕಿಮ್ಸ್ ಸಿಬ್ಬಂದಿ, ಎಡವಟ್ಟು ಮಾಡಿಕೊಂಡು, ಮುತ್ತವ್ವ ಪೂಜಾರಳ ಗಂಡು ಮಗು, ಬೀಬಿಜಾನಗೆ, ಬೀಬಿಜಾನಳ ಹೆಣ್ಣು ಮಗು ಮುತ್ತವ್ವಳಿಗೆ ಕೊಟ್ಟಿದ್ದರು ಎನ್ನಲಾಗಿದೆ.
ಬಡವರ ಪಾಲಿನ ಸಂಜೀವಿನಿಯಂತಿರುವ ಕಿಮ್ಸ್ ಆಸ್ಪತ್ರೆ, ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದು, ಕಿಮ್ಸ್ ಆಸ್ಪತ್ರೆ, ಅತ್ಯಾಧುನಿಕ ವೈದ್ಯಕೀಯ ಯಂತ್ರೋಪಕರಣಗಳನ್ನು ಹೊಂದಿದೆ. ಇಂತಹ ಸಮಯದಲ್ಲಿ ನಡೆದ ಅತಾಚುರ್ಯ ನಡೆದಿದ್ದು, ಮುಂದೆ ಎಚ್ಚರ ವಹಿಸಬೇಕಿದೆ. ನಿರ್ಲಕ್ಷ ತೋರಿದ ಸಿಬ್ಬಂದಿಗೆ ಶೋಕಾಸ್ ನೋಟಿಸ್ ನೀಡುವದಾಗಿ ಹೇಳಿದ್ದು, ವೇತನ ಕಡಿತಗೊಳಿಸುವದಾಗಿ ತಿಳಿಸಿದ್ದಾರೆ.