ಸಾಹಿತಿಗಳಿಗೆ ಅನಾಮಧೇಯ ಪತ್ರದ ಮೂಲಕ ಜೀವ ಬೆದರಿಕೆ ಪತ್ರ ಕಳುಹಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಸಿಸಿಬಿ ಪೊಲೀಸರು ದಾವಣಗೆರೆಯ ಮೂಲದ ಶಿವಾಜಿ ಜಾಧವ ಎಂಬಾತನನ್ನು ಬಂಧಿಸಿದ್ದಾರೆ. ನಿರಂತರವಾಗಿ ಜೀವ ಬೆದರಿಕೆ ಪತ್ರ ಬರೆಯುತ್ತಿದ್ದವ ಹಿಂದೂ ಸಂಘಟನೆ ಕಾರ್ಯಕರ್ತ ಶಿವಾಜಿ ರಾವ್ ಜಾಧವ್, ಎಂದು ತಿಳಿದು ಬಂದಿದೆ.
ಸುಮಾರು ಎರಡು ವರ್ಷಗಳಿಂದ ಕೊಲೆ ಬೆದರಿಕೆ ಪತ್ರ ಬರೆಯುತ್ತಿದ್ದ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಸಿಸಿಬಿ ಎಸಿಪಿ ನವೀನ್ ಕುಲಕರ್ಣಿ, ಮತ್ತು ತಂಡ ದಾವಣಗೆರೆಯಲ್ಲಿ ಆರೋಪಿಯನ್ನು ಹೆಡಮುರಿಗೆ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ದಾವಣಗೆರೆ ಸೇರಿದಂತೆ ಕೆಲವೆಡೆ ಕಾರ್ಯಾಚರಣೆ ನಡೆಸಿದ ಸಿಸಿಬಿ, ಶಂಕೆಯ ಮೇಲೆ 8 ಜನರನ್ನು ವಿಚಾರಣೆಗೆ ಒಳಪಡಿಸಿತ್ತು. ಈ ಪೈಕಿ ಶಿವಾಜಿ ರಾವ್ ಜಾಧವ್ ಮೇಲೆ ಸಿಸಿಬಿಗೆ ಇದ್ದ ಗುಮಾನಿ ಸತ್ಯವಾಗಿದೆ.
ಖ್ಯಾತ ಸಾಹಿತಿಗಳಾದ ಕುಂ.ವೀರಭದ್ರಪ್ಪ, ಬಂಜಗೆರೆ ಜಯಪ್ರಕಾಶ್, ಬಿ.ಎಲ್.ವೇಣು, ಬಿ.ಟಿ.ಲಲಿತಾ ನಾಯಕ್, ವಸುಂಧರ ಭೂಪತಿ, ನಿಜಗುಣಾನಂದ ಸ್ವಾಮೀಜಿ ಸೇರಿದಂತೆ ಕೆಲವು ಸ್ವಾಮೀಜಿಗಳಿಗೆ ಅನಾಮಧೇಯ ಹೆಸರಿನಲ್ಲಿ ಜೀವ ಬೆದರಿಕೆ ಪತ್ರಗಳು ಬಂದಿದ್ದವು. ಈ ಪತ್ರಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿತ್ತು. ಪತ್ರ ಬರೆಯುವವರನ್ನು ಪತ್ತೆ ಹಚ್ಚಲು ಸಿಸಿಬಿಗೆ ತನಿಖೆಗೆ ವಹಿಸಿತ್ತು. ಏಳು ಕಡೆಗಳಲ್ಲಿ ಎಫ್‌ಐಆರ್ ದಾಖಲಾಗಿತ್ತು.