ಧಾರವಾಡದ ಶಿವಳ್ಳಿ ಬಳಿ ಇರುವ ಉಣಕಲ ಕತ್ತರಿ ಹತ್ತಿರ ಕ್ರೂಸರ್ ಹಾಗೂ ದ್ವಿಚಕ್ರ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದೆ. ತುತ್ತಿನ ಚೀಲ ತುಂಬಿಸಿಕೊಳ್ಳಲು ಹೋದವರು ಅಪಘಾತದಲ್ಲಿ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಡೆದಿದೆ.
ಭೀಕರ ಬರಗಾಲಕ್ಕೆ ಬರ್ಬಾದ ಆದ ಬದುಕು.
ನವಲಗುಂದ ತಾಲೂಕು ಭೀಕರ ಬರಗಾಲದಿಂದ ತತ್ತರಿಸಿದೆ. ಹೆಬ್ಬಾಳ ಹಾಗೂ ಸುತ್ತಮುತ್ತಲಿನ ಹಳ್ಳಿಗರು ಅದರಲ್ಲೂ ಕೂಲಿ ನಂಬಿ ಬದುಕು ಕಟ್ಟಿಕೊಳ್ಳುವ ಜನ ಒಂದೊಪ್ಪತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಕೆಲಸ ಸಿಕ್ಕರೆ ಊಟ, ಇಲ್ಲದಿದ್ದರೆ ಅದೇ ಉಪವಾಸ. ಇಂತದರಲ್ಲಿ ಅಲ್ಲಿನ ಜನ ಬದುಕುತ್ತಿದ್ದಾರೆ. ಯಾವಾಗ ಮಳೆರಾಯ ಕೈ ಕೊಟ್ಟನೋ, ಅಲ್ಲಿನ ಕೂಲಿ ಕಾರ್ಮಿಕರ ಹೊಟ್ಟೆ ಮೇಲೆ ಬರೆ ಬಿತ್ತು. ಕುಟುಂಬದ ನೊಗ ಹೊತ್ತಿದ್ದವರು, ಕೆಲಸಕ್ಕಾಗಿ ಪ್ರತಿ ದಿನ ಧಾರವಾಡಕ್ಕೆ ಬರುತ್ತಿದ್ದರು. 7 ಘಂಟೆಗೆ ಬುತ್ತಿ ಕಟ್ಟಿಕೊಂಡು ಹೆಬ್ಬಾಳದಿಂದ ಹೊರಡುತ್ತಿದ್ದ ಕಾರ್ಮಿಕರು 9 ರ ಸುಮಾರಿಗೆ ಧಾರವಾಡಕ್ಕೆ ಬರುತ್ತಿದ್ದರು. ಸಿ ಬಿ ಟಿ ಬಳಿ ನಿಲ್ಲುತ್ತಿದ್ದ ಕಾರ್ಮಿಕರು ಕೆಲಸಕ್ಕೆ ಹೋಗುತ್ತಿದ್ದರು. ಎಂದಿನಂತೆ ಇವತ್ತು ಸಹ ಅವರು ಕೆಲಸ ಮುಗಿಸಿ ಮತ್ತೆ ಗ್ರಾಮದಿಂದ ಬಂದಿದ್ದ ಅದೇ ಕ್ರೂಸರ್ ನಲ್ಲಿ ಮರಳಿ ಹೆಬ್ಬಾಳ ಗ್ರಾಮಕ್ಕೆ ಹೋಗುತ್ತಿದ್ದರು. ಆದರೆ ಯಮರಾಯ ಕಾರ್ಮಿಕರಿದ್ದ ಕ್ರೂಸರ್ ನ್ನು ಶಿವಳ್ಳಿ ಗ್ರಾಮದ ಬಳಿ ನಿಲ್ಲಿಸಿಬಿಟ್ಟ. ಅಷ್ಟೇ, ಎದುರಿನಿಂದ ಬರುತ್ತಿದ್ದ ದ್ವಿಚಕ್ರ ವಾಹನ ಸವಾರರು ಕ್ರೂಸರ್ ಗೆ ಡಿಕ್ಕಿ ಹೊಡೆದಿದ್ದಾರೆ. ಅವರನ್ನು ತಪ್ಪಿಸಲು ಹೋಗಿ ಕ್ರೂಸರ್ ವಾಹನ ಪಲ್ಟಿಯಾಗಿದೆ. ಕ್ರೂಸರ್ ವಾಹನದಲ್ಲಿದ್ದ ಹೆಬ್ಬಾಳ ಗ್ರಾಮದ ಬಸವರಾಜ ಕುರಟ್ಟಿ ಮತ್ತು ಯಲ್ಲಪ್ಪ ಗಂಟಿ ಸ್ಥಳದಲ್ಲಿಯೇ ಉಸಿರು ಚೆಲ್ಲಿದ್ದಾರೆ.
ಇಲ್ಲಿದೆ ನೋಡಿ ಸತ್ತವರ ಕಣ್ಣೀರು ಕಹಾನಿ.
ಅಪಘಾತದಲ್ಲಿ ಮೃತಪಟ್ಟ ಬಸವರಾಜ ಕುರಟ್ಟಿಗೆ ಒಂದು ಎಕರೆ ಜಮೀನಿದೆ. ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವಿದೆ. ಇಬ್ಬರು ಶಾಲೆಗೆ ಹೋಗುತ್ತಾರೆ. ಬರಗಾಲ ಬಿದ್ದಿದ್ದರಿಂದ ಬಸವರಾಜ ಪ್ರತಿ ದಿನ ಧಾರವಾಡಕ್ಕೆ ಕೆಲಸಕ್ಕೆಂದು ಹೋಗುತ್ತಿದ್ದ. ದುಡಿದ ದುಡ್ಡಲ್ಲಿ ಇಬ್ಬರು ಮುದ್ದು ಮಕ್ಕಳಿಗೆ ಪ್ರತಿ ದಿನ ತಿನ್ನಲು ಏನಾದರು ತರುತ್ತಿದ್ದನಂತೆ. ವಿಧಿ ಆತನ ಕುಟುಂಬವನ್ನೇ ಬೀದಿಗೆ ಎಸೆದಿದೆ.
ಅಪಘಾತದಲ್ಲಿ ಅದೇ ಗ್ರಾಮದ ಯಲ್ಲಪ್ಪ ಘಂಟಿ ಸಹ ಸಾವನ್ನಪ್ಪಿದ್ದಾನೆ. ಈತನಿಗೂ ಒಂದು ಎಕರೆ ಜಮೀನಿದೆ. ಯಲ್ಲಪ್ಪನಿಗೆ 7 ವರ್ಷದ ಒಂದು ಹೆಣ್ಣು ಮಗುವಿದೆ. ದುಡಿದು ಬಂದರೆ ಮಾತ್ರ ಮನೆಯಲ್ಲಿ ಒಲೆ ಉರಿಯುವ ಪರಿಸ್ಥಿತಿ. ಬರಗಾಲ ಎದುರಾದ ಬಳಿಕ ಯಲ್ಲಪ್ಪ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದ. ಕುಟುಂಬದ ನೊಗ ಹೊತ್ತಿದ್ದ ಯಲ್ಲಪ್ಪ ಸಹ ಪ್ರತಿ ನಿತ್ಯ ಕೆಲಸಕ್ಕೆ ಧಾರವಾಡಕ್ಕೆ ಹೋಗುತ್ತಿದ್ದ. ಇನ್ನೇನು ಕೆಲಸ ಮುಗಿಸಿ ಮನೆಗೆ ಬರಬೇಕಿದ್ದ ಯಲ್ಲಪ್ಪ ದಾರಿಯಲ್ಲಿಯೆ ಹೆಣವಾಗಿ ಬಿದ್ದಿದ್ದಾನೆ.
ದ್ವಿಚಕ್ರ ವಾಹನ ಹಾಗೂ ಕ್ರೂಸರ್ ನಡುವೆ ನಡೆದ ಅಪಘಾತದಲ್ಲಿ ಕ್ರೂಸರ್ ನಲ್ಲಿದ್ದ ಇಬ್ಬರು ಸಾವನ್ನಪ್ಪಿದರೆ, 13 ಜನರಿಗೆ ಗಂಭೀರ ಗಾಯಗಳಾಗಿವೆ. ಧಾರವಾಡ ಮೂಲದ ದ್ವಿಚಕ್ರ ವಾಹನ ಸವಾರರ ಪರಿಸ್ಥಿತಿಯೂ ಚಿಂತಾಜನಕವಾಗಿದೆ. ಅದರಲ್ಲಿ ಒಬ್ಬನ ಕಾಲು ಛಿದ್ರ ಛಿದ್ರವಾಗಿದೆ. ಕ್ರೂಸರ್ ಚಾಲಕ ಸಿದ್ದಪ್ಪ ಅಂಗಡಿಯ ಕೈ ಮುರಿದಿದೆ. ದ್ವಿಚಕ್ರ ವಾಹನ ಸವಾರನೊಬ್ಬ ಈಗಷ್ಟೆ ಮೃತಪಟ್ಟ ಸುದ್ದಿ ಬಂದಿದೆ. ಗಂಭೀರವಾಗಿ ಗಾಯಗೊಂಡವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಜಿಲ್ಲಾಸ್ಪತ್ರೆಗೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಗೋಪಾಲ ಬ್ಯಾಕೋಡ ಹಾಗೂ ನವಲಗುಂದ ಶಾಸಕ ಎನ್ ಎಚ್ ಕೋನರೆಡ್ಡಿ ಧಾವಿಸಿ, ಗಾಯಳುಗಳನ್ನು ಕಿಮ್ಸ್ ಆಸ್ಪತ್ರೆಗೆ ಧಾಖಲಿಸಿದ್ದಾರೆ.
ಬರಗಾಲ ಇವರೆಲ್ಲರ ಬದುಕನ್ನು ಮುರಾಬಟ್ಟೆ ಮಾಡಿದೆ. ಮೃತಪಟ್ಟವರ ಕುಟುಂಬಕ್ಕೆ ಧೈರ್ಯ ಹೇಳುವ ಜೊತೆಗೆ ಆ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಬೇಕಿದೆ. ಅದಕ್ಕಿಂತ ಹೆಚ್ಚಾಗಿ ಗೂಳೆ ಹೋಗುವದನ್ನು ತಪ್ಪಿಸಬೇಕಿದೆ.
ವರದಿ – ಮುಸ್ತಫಾ ಕುನ್ನಿಭಾವಿ