ಭಾರತೀಯ ಓಲಂಪಿಕ್ ಅಸೋಸಿಯೇಷನ್ ಹಾಗೂ ಗೋವಾ ಕ್ರೀಡಾ ಪ್ರಾಧಿಕಾರ ಗೋವಾದಲ್ಲಿ ಆಯೋಜಿಸಿದ್ದ 37ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಸ್ಕ್ವಾಯ್ (ಸಮರ ಕಲೆ) ಕ್ರೀಡೆಯ ವೈಯ್ಶಕ್ತಿಕ ವಿಭಾಗದಲ್ಲಿ ಧಾರವಾಡ ಜಿಲ್ಲೆ ಅಣ್ಣಿಗೇರಿಯ ಕ್ರೀಡಾಪಟು ಗಣೇಶ ವೀ. ಶಾನುಭೋಗರ ಕಂಚಿನ ಪದಕ ಪಡೆಯುವುದರ ಮೂಲಕ ಗೆಲುವಿನ ನಗೆ ಬೀರಿದ್ದಾರೆ.
50 ಕೆಜಿ ತೂಕದ ಒಳಗಿನ ಸ್ಪರ್ಧಿಗಳಿಗಾಗಿ ಇರುವ ಈ ಸ್ಪರ್ಧೆಯಲ್ಲಿ ರಾಜಸ್ಥಾನ ಸ್ಪರ್ಧಿಯನ್ನು 2 ಅಂಕದಿಂದ ಸೋಲಿಸಿ ಗಣೇಶ ಗೆಲುವನ್ನು ತಮ್ಮದಾಗಿಸಿಕೊಂಡರು. ಮುಂದಿನ ಹಂತದಲ್ಲಿ ಆಂಧ್ರಪ್ರದೇಶದ ಸ್ಪರ್ಧಿಯ ವಿರುದ್ಧ ಸಮಬಲ ಸ್ಪರ್ಧೆ ನೀಡಿದರು.
ಆದರೆ ಅತಾಚುರ್ಯದಿಂದ ಆಂಧ್ರಪ್ರದೇಶದ ಸ್ಪರ್ಧಿಗೆ ಒಂದು ಅಂಕ ಹೆಚ್ಚಿಗೆ ನೀಡಲಾಯಿತು. ಇದರ ವಿರುದ್ಧ ಗಣೇಶ ಆಕ್ಷೇಪ ಎತ್ತಿದರು. ಆದರೆ ಈ ಆಕ್ಷೇಪ ನಿಗದಿತ ಸಮಯದಲ್ಲಿ ಸಲ್ಲಿಸಲಿಲ್ಲ ಎನ್ನುವ ಕಾರಣದಿಂದ ಅವರ ಮನವಿಯನ್ನು ಸ್ಪರ್ಧೆಯ ಮುಖ್ಯಸ್ಥರು ಪುರಸ್ಕರಿಸಲಿಲ್ಲ.
ಕಾಶ್ಮೀರದಲ್ಲಿ ಹುಟ್ಟಿದ ಈ ಸ್ಕ್ವಾಯ್ ಸಮರಕಲೆ ಕುರಿತು ಭಾರತೀಯ ಸ್ಕ್ವಾಯ್ ಅಸೋಸಿಯೇಷನ್ ರಾಷ್ಟ್ರಮಟ್ಟದಲ್ಲಿ ಜಮ್ಮುವಿನಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ, ಏಕ್ ಭಾರತ ಶ್ರೇಷ್ಠ ಭಾರತ ಯೋಜನೆ ಅಡಿ ಹರಿಯಾಣದಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಗಣೇಶ ಕಂಚಿನ ಪದಕ ಪಡೆದಿದ್ದರು.
ಈಗ ಮತ್ತೆ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಗಣೇಶ ಶಾನುಭೋಗರ ತಮ್ಮ ಗೆಲುವಿನ ಮೂಲಕ ಕರ್ನಾಟಕಕ್ಕೆ ಕಂಚಿನ ಪದಕ ತಂದ ಹಿನ್ನೆಲೆಯಲ್ಲಿ ಅವರು ತರಬೇತಿ ಪಡೆದ ಅಣ್ಣಿಗೇರಿಯ ಧಾರವಾಡ ಜಿಲ್ಲಾ ಸ್ಕ್ವಾಯ್ ಅಸೋಸಿಯೇಷನ್ ಹಾಗೂ ಗೋಲ್ಡನ್ ಕರಾಟೆ ಕ್ಲಬ್ ನ ಗುರು, ತರಬೇತುದಾರ ಗಣೇಶ ಇಳಕಲ್, ಕರ್ನಾಟಕ ಸರಕಾರ ಕ್ರೀಡಾ ಇಲಾಖೆ ಸ್ಕ್ವಾಯ್ ವಿಭಾಗದ ಕಾರ್ಯದರ್ಶಿ ಮಹಮ್ಮದ್ ಅಲಿ, ಸ್ಕ್ವಾಯ್ ಅಸೋಸಿಯೇಷನ್ ಫೆಡರೇಶನ್ ಗ್ರ್ಯಾಂಡ್ ಮಾಸ್ಟರ್ ಮೀರ್ ನಜೀರ್, ಸ್ಕ್ವಾಯ್ ಹಾಗೂ ಕರಾಟೆ ಸಂಸ್ಥೆಯ ಅಧ್ಯಕ್ಷರಾದ ಲಕ್ಷ್ಮಣ ನಾಯಕ ಮತ್ತು ಸಿ.ಜಿ. ನಾವಳ್ಳಿ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ. ಗಣೇಶ ಶಾನುಭೋಗರ ಹಿರಿಯ ಪತ್ರಕರ್ತ ವೀರೇಶ ಶಾನುಭೋಗರ ಅವರ ಪುತ್ರರಾಗಿದ್ದಾರೆ. ಗಣೇಶನ ಸಾಧನೆಗೆ ಸಚಿವ ಬಿ ನಾಗೇಂದ್ರ ಹರ್ಷ ವ್ಯಕ್ತಪಡಿಸಿ, ಅಭಿನಂಧಿಸಿದ್ದಾರೆ.