ಗೃಹಮಂತ್ರಿ ಜಿ ಪರಮೇಶ್ವರ ತವರಿನಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರಿನ ಸದಾಶಿವನಗರದ ಮನೆಯೊಂದರಲ್ಲಿ ನಡೆದಿದೆ.
ಮೂವರು ಮಕ್ಕಳ ಪ್ರಾಣ ತೆಗೆದು ಗರೀಬ್ ಸಾಬ್ ದಂಪತಿ ನೇಣಿಗೆ ಶರಣಾಗಿದ್ದಾರೆ. ಗರೀಬಸಾಬ, ಆತನ ಹೆಂಡತಿ ಸುಮಯ್ಯ, ಮಕ್ಕಳಾದ ಹಜೀನಾ, ಮೊಹ್ಮದ್ ಶಬೀರ್, ಮೊಹಮದ್ ಮುನೀರ್ ಮೃತಪಟ್ಟಿದ್ದಾರೆ.
# ಬಡತನ, ಸಾಲಭಾಧೆ, ಪಕ್ಕದ ಮನೆಯವರ ಕಿರುಕುಳ ಆತ್ಮಹತ್ಯೆಗೆ ಕಾರಣ #
ಗರೀಬಸಾಬ ಸಾಯುವ ಮುನ್ನ ಎರಡು ಪುಟಗಳ ಡೆತ್‌ನೋಟ್ ಬರೆದು ಇಟ್ಟಿದ್ದು, ಸಾಲಬಾಧೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿರುವುದಾಗಿ ಬರೆದಿದ್ದಾರೆ. ಇನ್ನು ಆತ್ಮಹತ್ಯೆಗೂ ಮೊದಲು ವಿಡಿಯೋ ಸಹ ಮಾಡಿದ್ದಾರೆ. ಶಿರಾ ತಾಲೂಕಿನ ಲಕ್ಕನಹಳ್ಳಿಯಿಂದ ತುಮಕೂರಿಗೆ ಬಂದಿದ್ದ ಗರೀಬಸಾಬ, ಸಣ್ಣಪುಟ್ಟ ವ್ಯಾಪಾರ ಮಾಡಿ ಬದುಕು ಕಟ್ಟಿಕೊಂಡಿದ್ದ. ಮಕ್ಕಳನ್ನು ಶಾಲೆಗೆ ಹಚ್ಚಿದ್ದ. ದುಡಿದ ದುಡ್ಡು ಸಾಲದೇ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. ಇದರಿಂದಾಗಿ ಮನೆಯಲ್ಲಿ ಒಂದೊಪ್ಪತ್ತಿನ ಊಟಕ್ಕೂ ತೊಂದರೆಯಾಗುತ್ತಿತ್ತು ಎನ್ನಲಾಗಿದೆ. ಅಲ್ಲದೆ ಪಕ್ಕದ ಮನೆಯ ಖಲಂದರ ಅವರ ಮಗಳು ಸಾನಿಯಾ, ಶಬಾನಾ, ಅವರ ಸಹೋದರ ನಿತ್ಯ ಕಿರುಕುಳ ಕೊಡುತ್ತಿದ್ದರು ಎಂದು ಆರೋಪಿಸಿ, ನಮ್ಮ ಸಾವಿಗೆ ಇವರೆಲ್ಲ ಕಾರಣ ಎಂದು ಡೆತ್ ನೋಟ್ ಬರೆದಿದ್ದಾರೆ.
ಸದ್ಯ ಸ್ಥಳಕ್ಕೆ ಎಸ್‌ಪಿ ಅಶೋಕ್ ವೆಂಕಟ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ತಿಲಕ್‌ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
