ನವಲಗುಂದ ವಿಧಾನಸಭಾ ಕ್ಷೇತ್ರದ ಚುನಾವಣೆ ರಣರಂಗವಾಗಿತ್ತು. ನವಲಗುಂದ ವಿಧಾನಸಭಾ ಕ್ಷೇತ್ರ ಜಿಲ್ಲೆಯ ಪ್ರತಿಷ್ಟಿತ ಕ್ಷೇತ್ರವಾಗಿತ್ತು. ಬಾಗಿಲುವರೆಗೆ ಬಂದಿದ್ದ ಕಾಂಗ್ರೇಸ್ ಟಿಕೇಟ್ ವಿನೋದ ಅಸೂಟಿಯವರ ಮನೆಯ ಹೊಸ್ತಿಲು ದಾಟಿ ಬರುವಷ್ಟರಲ್ಲಿ ಕೋನರೆಡ್ಡಿಯವರ ಮನೆ ತಲುಪಿತ್ತು. ಅದಾದ ನಂತರ ಪಕ್ಷದೊಳಗೆ ಭಿನ್ನಮತ ಎದುರಾಗಿದ್ದರು, ಅದಕ್ಕೆ ಆಸ್ಪದ ಕೊಡದ ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ವಿನೋದ ಅಸೂಟಿ ಕೋನರೆಡ್ಡಿಯವರ ಹೆಗಲಿಗೆ ಹೆಗಲು ಕೊಟ್ಟು, ಕೋನರೆಡ್ಡಿಯವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಷ್ಟೇ ಅಲ್ಲ ಇಬ್ಬರನ್ನು ಜೋಡೆತ್ತುಗಳೆಂದೆ ಕರೆಯಲಾಗಿತ್ತು.
ಕಾಂಗ್ರೇಸ್ ಟಿಕೇಟ್ ಕೈತಪ್ಪಿದ್ದರಿಂದ ವಿನೋದ ಅಸೂಟಿಯವರಿಗೆ ಸಮಾಧಾನಪಡಿಸಲು ಖುದ್ದು ರಾಜ್ಯ ಕಾಂಗ್ರೇಸ್ ಉಸ್ತುವಾರಿ ಸುರ್ಜಿವಾಲಾ ಮತ್ತು ನಲಪಾಡ ಅಣ್ಣಿಗೇರಿಗೆ ಬಂದಿದ್ದರು. ಕಾಂಗ್ರೇಸ್ ಸರ್ಕಾರ ರಚನೆಯಾದ ಬಳಿಕ ವಿನೋದ ಅಸೂಟಿಯವರಿಗೆ ಪ್ರಮುಖವಾದ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡುವದಾಗಿ ಮಾತು ಕೊಟ್ಟಿದ್ದರು. ಮಾತಿನಂತೆ ನಡೆದುಕೊಂಡ ಸುರ್ಜಿವಾಲಾ, ನಿಗಮ ಮಂಡಳಿಗೆ ವಿನೋದ ಅಸೂಟಿ ಹೆಸರನ್ನು ಅಂತಿಮಗೊಳಿಸಿದ್ದಾರೆ.
ವಿನೋದ ಅಸೂಟಿ ಹೆಸರು ಅಂತಿಮಗೊಳ್ಳುತ್ತಿದ್ದಂತೆ ಇದೀಗ ನವಲಗುಂದ ಶಾಸಕ ಎನ್ ಎಚ್ ಕೋನರೆಡ್ಡಿ, ಧಾರವಾಡ ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ವಿನೋದ ಅಸೂಟಿಯವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ತಮ್ಮ ಕರ್ತವ್ಯ ಮುಗಿಸಿದ್ದಾರೆ.
