ಹೆಬ್ಬಳ್ಳಿ ಜಿಲ್ಲಾ ಪಂಚಾಯತ ಬಿಜೆಪಿ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಿಕ ಪ್ರಕ್ರಿಯೆಗೆ ತಡೆ ನೀಡಲು ಸಾಧ್ಯವಿಲ್ಲ ಎಂದು ಹೈಕೋರ್ಟ ಹೇಳಿದೆ. ಯೋಗೇಶಗೌಡ ಕೊಲೆ ಪ್ರಕರಣಕ್ಕೆ ಸಂಬಂದಿಸಿದಂತೆ ಜನಪ್ರತಿನಿದಿಗಳ ವಿಶೇಷ ನ್ಯಾಯಾಲಯ ಜನೇವರಿ 29 ರಿಂದ ಫೆಬ್ರುವರಿ 1 ರ ವರೆಗೆ ವಿಚಾರಣೆ ಕೈಗೆತ್ತಿಕೊಳ್ಳಲಿದೆ.
ತನ್ನ ವಿರುದ್ಧದ ಆರೋಪಪಟ್ಟಿ ಮತ್ತು ನ್ಯಾಯಿಕ ಪ್ರಕ್ರಿಯೆಗೆ ತಡೆ ಕೋರಿ ವಕೀಲರ ಮೂಲಕ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ ನೇತೃತ್ವದ ಏಕಸದಸ್ಯ ಪೀಠ ನಡೆಸಿತು. ವಿನಯ ಕುಲಕರ್ಣಿಯವರ ಪರ ಹಿರಿಯ ವಕೀಲರಾದ ಸಿ ವಿ ನಾಗೇಶ ಅವರು ವಿಚಾರಣಾಧಿನ ನ್ಯಾಯಾಲಯ ತನ್ನ ಪ್ರಕ್ರಿಯೆ ಆರಂಭಿಸಲು ದಿನಾಂಕ ನಿಗದಿಪಡಿಸಿದ್ದು ಇದಕ್ಕೆ ಮಧ್ಯಂತರ ತಡೆ ನೀಡಬೇಕೆಂದು ಎಂದು ಕೋರಿದ್ದರು. ತಡೆ ಅರ್ಜಿ ತಳ್ಳಿಹಾಕಿದ ಪೀಠ, ಪ್ರತಿವಾದಿ ಸಿ ಬಿ ಐ ಗೆ ನೋಟಿಸ್ ಜಾರಿ ಮಾಡಲು ಆದೇಶ ನೀಡಿತು. ಮತ್ತು ವಿಚಾರಣೆಯನ್ನು ಜನೇವರಿ 19 ಕ್ಕೆ ಮುಂದೂಡಿತು.
ಧಾರವಾಡ ಉಪನಗರ ಠಾಣೆ ವ್ಯಾಪ್ತಿಯಲ್ಲಿ 2016 ರ ಜೂನ್ 15 ರಂದು ನಡೆದಿದ್ದ ಯೋಗೀಶಗೌಡ ಕೊಲೆ ಕೇಸಿನಲ್ಲಿ ಸಿ ಬಿ ಐ ತನಿಖೆ ನಡೆಸಿ, ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದೆ. ಜನಪ್ರತಿನಿದಿಗಳ ವಿಶೇಷ ನ್ಯಾಯಾಲಯ ಕೊಲೆ ಪ್ರಕರಣಕ್ಕೆ ಸಂಬಂದಿಸಿದಂತೆ ಜನೇವರಿ 29 ರಿಂದ ಫೆಬ್ರುವರಿ 1 ರ ವರೆಗೆ ನಿಯಮಿತವಾಗಿ ವಿಚಾರಣೆ ನಡೆಸಲಿದೆ.