ನಾಲ್ಕು ಬಾರಿ ಸಂಸದರಾಗಿ ಹಾಲಿ ಕೇಂದ್ರದ ಪ್ರಭಾವಿ ಸಚಿವರಾಗಿರುವ ಪ್ರಲ್ಲಾದ ಜೋಶಿ 5 ನೇ ಸಲ ಸಂಸತ್ತಿಗೆ ಹೋಗುವದಕ್ಕೆ ಸಿದ್ದರಾದ ಬೆನ್ನಲ್ಲೇ ಬಿಜೆಪಿಯಲ್ಲಿ ಧಾರವಾಡ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ.
ಬಿಡುವಿಲ್ಲದ ಕೆಲಸದ ಮಧ್ಯೆ ತಾವು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಪ್ರಚುರ ಪಡಿಸುತ್ತಾ ಹೋಗುತ್ತಿರುವ ಸಚಿವ ಜೋಶಿ, 5 ನೇ ಸಲ ಸಂಸದರಾಗಿ ಹೋಗುವ ದಾರಿ ಸುಲಭವಾಗಿಲ್ಲ ಎಂದು ಹೇಳಲಾಗುತ್ತಿದೆ. ಪಕ್ಷದೊಳಗೆ ಆಂತರಿಕ ಭಿನ್ನಮತ ಕಾಣಿಸಿಕೊಂಡಿದ್ದು, ಅಸಮಾಧಾನ ಹೊಗೆಯಾಡುತ್ತಿದೆ.
ಬಿಜೆಪಿ ಮೂಲಗಳ ಪ್ರಕಾರ, ಹಾಲಿ ಸಂಸದ ಪ್ರಲ್ಲಾದ ಜೋಶಿಯವರ ಬದಲಾಗಿ ಬೇರೊಬ್ಬರಿಗೆ ಟಿಕೇಟ್ ಕೊಟ್ಟು, ರಾಷ್ಟ್ರ ಮಟ್ಟದಲ್ಲಿ ಅವರಿಗೆ ಮಹತ್ವದ ಜವಾಬ್ದಾರಿ ಕೊಡುವ ಬಗ್ಗೆ ಉನ್ನತ ನಾಯಕರು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಬಿಜೆಪಿ ಬಿಡುಗಡೆ ಮಾಡಿರುವ ಮೊದಲ ಪಟ್ಟಿಯಲ್ಲಿ ಜೋಶಿ ಸೇರಿದಂತೆ ಕರ್ನಾಟಕದ ಯಾವೊಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡದಿರುವದು ಚರ್ಚೆಗೆ ಎಡೆಮಾಡಿದೆ.
ವಿಧಾನ ಪರಿಷತ್ ಮತ್ತು ರಾಜ್ಯಸಭೆಗೆ ಅಚ್ಚರಿಯ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ಗಮನ ಸೆಳೆದಿರುವ ಬಿಜೆಪಿ ಕೇಂದ್ರ ಸಮಿತಿ, ಯಾವ ನಿರ್ಧಾರ ತೆಗೆದುಕೊಳ್ಳತ್ತೋ ಅನ್ನೋದನ್ನ ಕಡೇ ಕ್ಷಣದವರೆಗೂ ಬಿಟ್ಟುಕೊಡಲ್ಲ.
ಹಾಗೆಯೇ ಪಕ್ಷದ ಅಲಿಖಿತ ನಿಯಮದ ಪ್ರಕಾರ ನಾಲ್ಕು ಸಲ ಸತತವಾಗಿ ಸಂಸದರಾಗಿ ಆಯ್ಕೆಯಾಗಿರುವವರನ್ನು 5 ನೇ ಸಲಕ್ಕೆ ವಿಶ್ರಾಂತಿ ಕೊಟ್ಟು, ಅವರನ್ನು ಪಕ್ಷದ ಕೆಲಸಕ್ಕೆ ಬಳಸಿಕೊಳ್ಳುವ ವ್ಯವಸ್ಥೆ ಶಿಸ್ತಿನ ಪಕ್ಷ ಎಂದು ಕರೆಯಲ್ಪಡುವ ಬಿಜೆಪಿಯಲ್ಲಿದೆ. ನಾಲ್ಕು ಸಲ ಸಂಸದರಾಗಿ ಧಾರವಾಡ ಜಿಲ್ಲೆಗೆ ಅನೇಕ ಯೋಜನೆಗಳನ್ನು ತಂದಿರುವ ಜೋಶಿಯವರ ಬದಲು ಬೇರೊಬ್ಬರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ಪಕ್ಷದೊಳಗೆ ಮಾತನಾಡಿಕೊಳ್ಳಲಾಗುತ್ತಿದೆ.
ಪ್ರಸಿದ್ಧ ನಾನ್ನುಡಿಯಂತೆ ” ಯಾವದು ಅಲ್ಲಾ, ಅದು ಹೌದು ” ಯಾವದು ಹೌದು ಅದು ಅಲ್ಲಾ ” ಎಂಬಂತಹ ಸ್ಥಿತಿ ಬಿಜೆಪಿಯಲ್ಲಿ ನಿರ್ಮಾಣವಾಗಿದೆ. ಅಭ್ಯರ್ಥಿ ಆಯ್ಕೆ ಬಗ್ಗೆ ಪಕ್ಷದೊಳಗೆ ಗುಸುಗುಸು ಚರ್ಚೆ ಆರಂಭವಾಗಿದ್ದು, ಎಲ್ಲದಕ್ಕೂ ಉತ್ತರ ಬಿಜೆಪಿಯ ಎರಡನೇ ಪಟ್ಟಿಯಲ್ಲಿ ಸಿಗಲಿದೆ.
