ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಉದ್ದೇಶ ಪೂರ್ವಕವಾಗಿ ಲಿಂಗಾಯತ ನಾಯಕರನ್ನು ಕಡೆಗಣಿಸಿದ್ದು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಲಿಂಗಾಯತ ನಾಯಕರನ್ನು ಮೂಲೆ ಗುಂಪು ಮಾಡಿರುವುದು ಸತ್ಯ ಎಂದು ಕಾಂಗ್ರೇಸ್ ನಾಯಕ ರಜತ್ ಉಳ್ಳಾಗಡ್ಡಿ ಮಠ ಹೇಳಿದ್ದಾರೆ.
ಈ ಹಿಂದೆ ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಅವರ ಕುತಂತ್ರದಿಂದ ಲಿಂಗಾಯತ ಪ್ರಬಲ ನಾಯಕರಾದ ವಿನಯ್ ಕುಲಕರ್ಣಿ, ಎಸ್ ಐ ಚಿಕ್ಕಣಗೌಡರ , ಸಿ ಎಮ್ ನಿಂಬಣ್ಣವರ, ಜಗದೀಶ್ ಶೆಟ್ಟರ್, ಸೇರಿದಂತೆ ಅನೇಕ ಮುಖಂಡರು ಅನ್ಯಾಯಕ್ಕೆ ಒಳಗಾಗಿದ್ದಾರೆ ಎಂದು ರಜತ್ ತಿಳಿಸಿದ್ದಾರೆ.
ಕಾಂಗ್ರೆಸ್, ಲಿಂಗಾಯತ ನಾಯಕರನ್ನು ಚೆನ್ನಾಗಿ ನಡೆಸಿಕೊಂಡಿದೆ. ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಲ್ಲಿ ಕಾಂಗ್ರೇಸ್ ನಿಂದ ಸ್ಪರ್ಧಿಸಿ, ಸೋತರು ಸಹ ಜಗದೀಶ ಶೆಟ್ಟರ್ ಅವರನ್ನು ವಿಧಾನ ಪರಿಷತ್ ಗೆ ಆಯ್ಕೆ ಮಾಡಿತ್ತು ಎಂದು ನೆನಪಿಸಿದ್ದಾರೆ.
ಇದೀಗ ಶೆಟ್ಟರ್ ಅವರಿಂದ ತೆರವಾಗಿರುವ ಪರಿಷತ್ ಸ್ಥಾನವನ್ನು ಕೂಡ ಜಿಲ್ಲೆಯ ಲಿಂಗಾಯತ ನಾಯಕರಿಗೆ ನೀಡುವ ಮಾತನ್ನು ಕಾಂಗ್ರೆಸ್ ಹೈ ಕಮಾಂಡ್ ನೀಡಿದ್ದು ಲಿಂಗಾಯತ ನಾಯಕತ್ವಕ್ಕೆ ವಿಶೇಷ ಮನ್ನಣೆ ನೀಡುತ್ತಿದೆ. ಅಲ್ಲದೆ ಮುಂದೆಯೂ ನೀಡಲಿದೆ ಎನ್ನುವ ಭರವಸೆ ನಮಗೆ ಇದೆ
ಆದ್ದರಿಂದ ಲಿಂಗಾಯತ ಸಮುದಾಯ ಹಾಗೂ ಸ್ವಾಮೀಜಿಗಳು ಈ ಬಾರಿ ಕಾಂಗ್ರೆಸ್ ಪಕ್ಷದ ಜಾತ್ಯತೀತ ಮುಗ್ದ ನಾಯಕ ವಿನೋದ ಅಸೂಟಿಗೆ ಬೆಂಬಲ ನೀಡಬೇಕು ಎಂದು ರಜತ್ ಸ್ವಾಮೀಜಿಗಳಲ್ಲಿ ಮನವಿ ಮಾಡಿದ್ದಾರೆ.