ಧಾರವಾಡ ಲೋಕಸಭಾ ಕ್ಷೇತ್ರ, ಹಿಂದೆಂದಿಗಿಂತಲೂ ಹೆಚ್ಚು ಸದ್ದು ಮಾಡುತ್ತಿದೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಸಿಲಿನ ಶಾಖ ಹೆಚ್ಚಾದಂತೆ ರಾಜಕೀಯ ನಿಗಿ ನಿಗಿಯಾಗಿ ಕುದಿಯುತ್ತಿದೆ.
ಯಾವಾಗ ಕಣಕ್ಕೆ ದಿಂಗಾಲೇಶ್ವರ ಶ್ರೀಗಳ ಎಂಟ್ರಿಯಾಯ್ತೋ, ಕದನ ಕಣ ರಣ ರೋಚಕ ಸ್ಥಿತಿಗೆ ತಲುಪಿದೆ. ಕೇಂದ್ರ ಸಚಿವ ಜೋಶಿಯವರ ಮೇಲೆ ಒಂದೇ ಸಮನೆ ಆರೋಪಗಳ ಸುರಿಮಳೆಗೈಯುತ್ತಿರುವ ಶ್ರೀಗಳು, ಜಿಲ್ಲೆಯ ರಾಜಕಾರಣದಲ್ಲಿ ಸುಂಟರಗಾಳಿ ಎಬ್ಬಿಸಿದ್ದಾರೆ.
ಅಷ್ಟೇ ಅಲ್ಲ, ಯಾವಾಗ ದಿಂಗಾಲೇಶ್ವರ ಶ್ರೀಗಳು, ತಾನು ಜೋಶಿ ವಿರುದ್ಧ ಸ್ಪರ್ಧೆಗೆ ರೆಡಿ ಅಂದ್ರೋ, ಕೆಲವರಿಗೆ ಉರಿ ಬಿದ್ದ ಅನುಭವವಾಗಿದೆ. ಕಾಂಗ್ರೇಸ್ ಹಾಗೂ ಬಿಜೆಪಿ ಎರಡು ಪಕ್ಷಗಳು ಪತರಗಟ್ಟಿ ಹೋಗಿವೆ. ಭಾವೈಕ್ಯತಾ ಪೀಠ ಎನಿಸಿರುವ ಶಿರಹಟ್ಟಿ ಮಠ ಎಲ್ಲ ಸಮುದಾಯವನ್ನು ಪ್ರತಿನಿಧಿಸುತ್ತಿದ್ದು ಎರಡು ಪಕ್ಷಗಳಿಗೆ ಎಲ್ಲಿ ಮತಗಳು ಚದುರಿ ಹೋಗ್ತಾವೋ ಅನ್ನೋ ಭಯ ಆರಂಭವಾಗಿದೆ.
ಖಾವಿ ಧಾರಿಗೆ ಖಾಕಿ ಮೇಲೆ ಯಾಕೆ ಬಂತು ಮೋಹ
ಜೋಶಿ ವಿರುದ್ಧ ಶ್ರೀಗಳು ಗುಟುರು ಹಾಕಿದ್ದು ಯಾಕೆ
ದಿಂಗಾಲೇಶ್ವರ ಶ್ರೀಗಳು, ತಮ್ಮ ಸ್ಪರ್ಧೆ ಏನಿದ್ದರೂ ಜೋಶಿಯವರನ್ನು ಸೋಲಿಸುವದು ಆಗಿದೆ, ಅಂದಿದ್ದೆ ತಡ,ಇದನ್ನು ಕೇಳಿಸಿಕೊಂಡ ಜೋಶಿಯವರು ತಡಬಡಾಯಿಸಿದ್ದಂತು ಸತ್ಯ. ಲಿಂಗಾಯತ ಪ್ಲೇ ಕಾರ್ಡ ಉಪಯೋಗಿಸಿದ ಶ್ರೀಗಳು, ಸಖತ್ತಾಗಿಯೇ ಜೋಶಿಯವರಿಗೆ ಏಟು ಕೊಟ್ಟಿದ್ದಾರೆ.
ಮಾತು ಮಾತಿನಲ್ಲಿಯೂ ಜೋಶಿಯವರಿಂದ ಲಿಂಗಾಯತರಿಗೆ ಅನ್ಯಾಯವಾಗಿದೆ ಎಂದು ಹೇಳುತ್ತಾ ಹೊರಟಿರುವ ಶ್ರೀಗಳು ಕ್ಷೇತ್ರದ ಲೆಕ್ಕಾಚಾರವನ್ನೇ ಬದಲಿಸಿದ್ದಾರೆ. ಹಿಂದುತ್ವದ ಹೆಸರಲ್ಲಿ ಚುನಾವಣೆ ಮಾಡುತ್ತಿದ್ದ ಜೋಶಿಯವರಿಗೆ ಶ್ರೀಗಳು ಬಹುತ್ವದ, ಬಂಧುತ್ವದ ಪಾಠ ಮಾಡಿದ್ದಾರೆ.
ರಾಜಕೀಯ ಮೋಹ ನನಗಿಲ್ಲ ಎಂದಿರುವ ಶ್ರೀಗಳು, ಜೋಶಿಯವರಿಂದ ಲಿಂಗಾಯತ ಸಮಾಜ ಸೇರಿದಂತೆ ತುಳಿತಕ್ಕೆ ಒಳಗಾಗಿರುವ ಎಲ್ಲ ಸಮುದಾಯದ ಪರ ದ್ವನಿಯಾಗಿ ನನ್ನ ಸ್ಪರ್ಧೆ ಎಂದು ಹೇಳಿದ್ದು, ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ.
ಖ್ಯಾತ ಪ್ರವಚನ, ನೇರ ಮಾತುಗಳ ಮೂಲಕ ಮನೆ ಮಾತಾಗಿರುವ ಫಕೀರ ದಿಂಗಾಲೇಶ್ವರ ಶ್ರೀಗಳು ರಾಜಕೀಯಕ್ಕೆ ಯಾಕೆ ಬಂದ್ರು ಅನ್ನೋದನ್ನ ಶ್ರೀಗಳು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಕ್ಷೇತ್ರದಲ್ಲಿ ಲಿಂಗಾಯತ ವರ್ಸಸ್ ಬ್ರಾಹ್ಮಣ ಜಟಾಪಟಿ ಜೋರಾಗಿದೆ. ಶ್ರೀಗಳ ಮತ್ತು ಜೋಶಿಯವರ ನಡುವಿನ ಕದನ, ಕಾಂಗ್ರೇಸ್ ಅಭ್ಯರ್ಥಿ ವಿನೋದ ಅಸೂಟಿ ಗೆಲುವಿಗೆ ದಾರಿ ಮಾಡಿದೆ ಎನ್ನಲಾಗಿದೆ.
ಒಟ್ಟಾರೆ, ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕದನ ಕುತೂಹಲ ಮನೆ ಮಾಡಿದ್ದು, ಶ್ರೀಗಳು ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದಾರೆ.