ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಮತದಾನ ಆರಂಭವಾಗಿದೆ. ಬೆಳಿಗ್ಗೆಯಿಂದಲೇ ಮತಗಟ್ಟೆಗಳಲ್ಲಿ ಜನಜಂಗುಳಿ ಕಂಡು ಬಂದಿದೆ.
ಇದೆಲ್ಲದರ ಮದ್ಯೆ ಮೊದಲ ಬಾರಿಗೆ ಮತದಾನ ಮಾಡಿದ ಯುವಕ, ಯುವತಿಯರು ಸಂಭ್ರಮದಿಂದ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಂಡಿದ್ದಾರೆ. ಧಾರವಾಡದ ಜ್ಞಾನ ವಿಹಾರ ಮತಗಟ್ಟೆಯಲ್ಲಿ ನಾಗವೇಣಿ ನಾಗನಗೌಡ ಪಾಟೀಲ ಮೊದಲ ಬಾರಿಗೆ ಮತದಾನ ಮಾಡಿದ್ದಾಳೆ.
ಪ್ರಜಾಪ್ರಭುತ್ವದ ಅತ್ಯಂತ ದೊಡ್ಡ ಹಬ್ಬದಲ್ಲಿ ಮೊದಲ ಬಾರಿಗೆ ಹಕ್ಕು ಚಲಾಯಿಸಿದ್ದೇನೆ. ನನಗೆ ಅತ್ಯಂತ ಖುಷಿ ಕೊಟ್ಟಿದ ದಿನ ಎಂದು ಹೇಳಿದ ನಾಗವೇಣಿ, ಬಿಸಿಲು ಇದೆ ಎಂದು ಹೇಳಿ ಮನೆಯಲ್ಲಿ ಕುಳಿತುಕೊಳ್ಳಬೇಡಿ, ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿ ಎಂದು ಮನವಿ ಮಾಡಿದ್ದಾಳೆ.
ಕೇವಲ ವಾಟ್ಸಪ್, ಫೇಸ್ ಬುಕ್ ನಲ್ಲಿ ದೇಶದ ಬಗ್ಗೆ ಚಿಂತೆ ಮಾಡುವ ಬುದ್ದಿವಂತರು, ಮತ ಚಲಾಯಿಸಲು ಬರಲ್ಲ. ಮೊನ್ನೆ ಬೆಂಗಳೂರಿನಲ್ಲಿ ನಡೆದ ಮೊದಲ ಹಂತದ ಮತದಾನವೆ ಸಾಕ್ಷಿ ಎಂದಿದ್ದಾರೆ. ಮತದಾನದ ದಿನ ರಜೆ ದಿನ ಎಂದು ತಿಳಿದು ಮನೆಯಲ್ಲಿ ಕುಳಿತುಕೊಳ್ಳದೆ, ಮತಗಟ್ಟೆಗೆ ಬಂದು ಮತ ಚಲಾಯಿಸಿ ಎಂದು ನಾಗವೇಣಿ ಮನವಿ ಮಾಡಿದ್ದಾಳೆ.