Download Our App

Follow us

Home » ಕರ್ನಾಟಕ » ಧಾರವಾಡ ಲೋಕಸಭಾ ಕ್ಷೇತ್ರ ಅಭ್ಯರ್ಥಿಗಳ ಎದೆ ಡವ ಡವ. ಗೆಲ್ಲೋದು ಯಾರು? ಯಾರಿಗೆ ಎಲ್ಲಿ ಹೆಚ್ಚು ಎಲ್ಲಿ ಕಡಿಮೆ! ಗೃಹ ಲಕ್ಷ್ಮೀಯರ ಮೇಲೆ ನಿಂತಿದೆ ಫಲಿತಾಂಶ

ಧಾರವಾಡ ಲೋಕಸಭಾ ಕ್ಷೇತ್ರ ಅಭ್ಯರ್ಥಿಗಳ ಎದೆ ಡವ ಡವ. ಗೆಲ್ಲೋದು ಯಾರು? ಯಾರಿಗೆ ಎಲ್ಲಿ ಹೆಚ್ಚು ಎಲ್ಲಿ ಕಡಿಮೆ! ಗೃಹ ಲಕ್ಷ್ಮೀಯರ ಮೇಲೆ ನಿಂತಿದೆ ಫಲಿತಾಂಶ

ಜಿದ್ದಾಜಿದ್ದಿನ ಕ್ಷೇತ್ರವಾಗಿರುವ ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣೆ ಫಲಿತಾಂಶ ನಾಳೆ ಹೊರಬೀಳಲಿದೆ. ನಾಳೆ ಮುಂಜಾನೆ 8 ಘಂಟೆಯಿಂದ ಮತ ಏಣಿಕೆ ಆರಂಭವಾಗಲಿದೆ.

8 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿ ಹೊಂದಿರುವ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ 18 ಲಕ್ಷ 31 ಸಾವಿರದಾ 975 ಮತದಾರರ ಪೈಕಿ 13 ಲಕ್ಷ 62 ಸಾವಿರದಾ 421 ಮತಗಳು ಚಲಾವಣೆಯಾಗಿವೆ. ಕ್ಷೇತ್ರದಲ್ಲಿ ಒಟ್ಟು ಶೇಕಡಾ 74.37 ರಷ್ಟು ಮತದಾನವಾಗಿದೆ. 

ಕಲಘಟಗಿ ಹಾಗೂ ಕುಂದಗೋಳ ಕ್ಷೇತ್ರದಲ್ಲಿ ಅತೀ ಹೆಚ್ಚು ಮತದಾನವಾಗಿದೆ. ಕಲಘಟಗಿಯಲ್ಲಿ ಶೇಕಡಾ 82.27 ರಷ್ಟು ಮತದಾನವಾಗಿದ್ದು, 1 ಲಕ್ಷ 64 ಸಾವಿರದಾ 501 ಮತಗಳು ಚಲಾವಣೆಯಾದರೆ, ಕುಂದಗೋಳದಲ್ಲಿ 1 ಲಕ್ಷ 53 ಸಾವಿರದಾ 555 ಮತಗಳು ಚಲಾವಣೆಯಾಗಿವೆ. 

ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಕಾಂಗ್ರೇಸ್ ಮತ್ತು ನಾಲ್ಕರಲ್ಲಿ ಬಿಜೆಪಿ ಶಾಸಕರಿದ್ದಾರೆ. 6 ಲಕ್ಷ 99 ಸಾವಿರದಾ 244 ಪುರುಷರು ಮತ್ತು 6 ಲಕ್ಷ 63 ಸಾವಿರದಾ 151ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ. 

ಬಿಜೆಪಿಗೆ   ಮತ್ತು   ಕಾಂಗ್ರೇಸಸ್ಸಿಗೆ ಲೀಡ್    ಕೊಡಲಿರುವ ಸಂಭಾವ್ಯ ಕ್ಷೇತ್ರಗಳು

ಬಿಜೆಪಿಯ ಆಂತರಿಕ ಲೆಕ್ಕಾಚಾರದ ಪ್ರಕಾರ ಅರವಿಂದ ಬೆಲ್ಲದ ಅವರು ಪ್ರತಿನಿಧಿಸುವ ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ಬಿಜೆಪಿಗೆ 50 ಸಾವಿರ ಲೀಡ್ ಸಿಗಲಿದೆ ಎಂದು ಹೇಳಲಾಗಿದೆ.

ಲೀಡ್ ಸಿಗಲು ಕಾರಣ – ಕಳೆದ 5 ಅವಧಿಯಿಂದ ಈ ಕ್ಷೇತ್ರದಲ್ಲಿ ಅರವಿಂದ ಬೆಲ್ಲದ ಕುಟುಂಬ ಭದ್ರ ಬುನಾದಿ ಹಾಕಿದ್ದು, ಕಾಂಗ್ರೇಸ್ ನಲ್ಲಿ ಈ ಕ್ಷೇತ್ರದಲ್ಲಿ ಗುಂಪುಗಾರಿಕೆಯಲ್ಲಿ ಕಾಲ ಕಳೆದಿದ್ದು, ಬಿಜೆಪಿಗೆ ಇಲ್ಲಿ ಪ್ಲಸ್ ಆಗುತ್ತದೆ ಅನ್ನೋ ಲೆಕ್ಕಾಚಾರವಿದೆ. 

ಇನ್ನು ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ಲ್ಲಿಯೂ ಬಿಜೆಪಿ ಅಭ್ಯರ್ಥಿಗೆ ಸುಮಾರು 50 ಸಾವಿರ ಲೀಡ್ ಸಿಗಲಿದೆ ಎಂದು ಹೇಳಲಾಗಿದೆ. ಈ ಕ್ಷೇತ್ರದಿಂದ ನಿರಂತರವಾಗಿ ಬಿಜೆಪಿ ಇಂದ ಗೆಲ್ಲುತ್ತಿದ್ದ ಜಗದೀಶ್ ಶೆಟ್ಟರ, ಬಿಜೆಪಿ ಬಿಟ್ಟ ಮೇಲೆ ಕಾಂಗ್ರೇಸ್ಸಿನಿಂದ ಸೋಲು ಅನುಭವಿಸಿದ್ದರು. ಹೀಗಾಗಿ ಈ ಕ್ಷೇತ್ರ ಬಿಜೆಪಿಯ ಭದ್ರಕೋಟೆ ಎಂದೆ ಹೆಸರಾಗಿದೆ. ಇಲ್ಲಿ ಸಧ್ಯ ಬಿಜೆಪಿ ಇಂದ ಮಹೇಶ ಟೆಂಗಿನಕಾಯಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 

ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಲ್ಲಿ ಬಿಜೆಪಿಗೆ ಸಂಭಾವ್ಯ ಲೀಡ್ ಸಿಗಲು ಕಾರಣ – ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಲ್ಲಿ ಕಾಂಗ್ರೇಸ್ ಸಂಘಟನೆ ಕೊರತೆ ಇದ್ದು, ಸೆಂಟ್ರಲ್ ಕ್ಷೇತ್ರದಲ್ಲಿ ಮನೆಗೊಬ್ಬ ಲೀಡರ್ ಇರೋ ಕಾರಣ, ಈ ಕ್ಷೇತ್ರದಲ್ಲಿಯೂ ಕಾಂಗ್ರೇಸ್ ಪಾಳಯದಲ್ಲಿ ಗುಂಪುಗಾರಿಕೆ ಇದೆ. ಹೀಗಾಗಿ ಈ ಕ್ಷೇತ್ರದಲ್ಲಿ ಕಾಂಗ್ರೇಸ್ಸಿಗಿಂತ ಹೆಚ್ಚು ಮತಗಳನ್ನು ಬಿಜೆಪಿ ಪಡೆಯಲಿದೆ ಅನ್ನೋ ಲೆಕ್ಕಾಚಾರವಿದೆ. 

ಇನ್ನುಳಿದಂತೆ ಕುಂದಗೋಳ ಕ್ಷೇತ್ರದಲ್ಲಿ ಕಾಂಗ್ರೇಸ್ಸಿನ ಕುಸುಮಾವತಿ ಶಿವಳ್ಳಿಯವರನ್ನು ಸೋಲಿಸಿ ಶಾಸಕರಾಗಿರುವ ಎಮ್ ಆರ್ ಪಾಟೀಲ, ವಿಧಾನಸಭೆಯಲ್ಲಿ ಹೆಚ್ಚು ಕಡಿಮೆ ಕುರುಬರ ಮತಗಳನ್ನು ಪಡೆದು ಆಯ್ಕೆಯಾಗಿದ್ದರು. ಸಧ್ಯ ಬದಲಾದ ರಾಜಕಾರಣದಲ್ಲಿ ಕಾಂಗ್ರೇಸ್ ಅಭ್ಯರ್ಥಿ ವಿನೋದ ಅಸೂಟಿ ಕುರುಬ ಸಮಾಜಕ್ಕೆ ಸೇರಿರುವ ಕಾರಣ ಕುರುಬ ಸಮುದಾಯದ ಮತಗಳು ಕೈ ಪಕ್ಷದ ಅಭ್ಯರ್ಥಿಯ ಪಾಲಾಗಲಿವೆ. ಅಲ್ಲದೆ ಮಾಜಿ ಶಾಸಕ ಎಸ್ ಐ ಚಿಕ್ಕನಗೌಡ್ರ ಬಿಜೆಪಿ ಇಂದ ದೂರವಾಗಿದ್ದು, ಬಿಜೆಪಿಗೆ ಈ ಕ್ಷೇತ್ರದಲ್ಲಿ ಸ್ವಲ್ಪ ಹಿನ್ನೆಡೆಯಾಗಲಿದೆ. ಲಿಂಗಾಯತ ಮತಗಳನ್ನು ಚಿಕ್ಕನಗೌಡರ ಕಟ್ಟಿ ಹಾಕಿದ್ದಾರೆ ಎಂದು ಹೇಳಲಾಗಿದೆ. 

ಕುಂದಗೋಳ ಕ್ಷೇತ್ರದಲ್ಲಿ ಸಮಬಲದ ಪೈಪೋಟಿ ಎದುರಾಗಲಿದೆ ಎಂದು ಹೇಳಲಾಗಿದೆ. ಇಲ್ಲಿ ಕಾಂಗ್ರೇಸ್ ಪಡೆದಷ್ಟು ಮತಗಳನ್ನು ಬಿಜೆಪಿ ಪಡೆಯಲಿದೆ. 

ಸಚಿವ ಸಂತೋಷ ಲಾಡ್ ಪ್ರತಿನಿಧಿಸುವ ಕಲಘಟಗಿ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೇಸ್ ನಡುವೆ ಸಮಬಲದ ಹೋರಾಟ ನಡೆದಿದೆ. ಮರಾಠಾ ಹಾಗು ಲಿಂಗಾಯತ ಪ್ರಾಭಲ್ಯದ ಕಲಘಟಗಿಯಲ್ಲಿ ಬಿಜೆಪಿ ಇಂದ ಸ್ಪರ್ಧಿಸಿ ಸೋಲು ಅನುಭವಿಸಿರುವ ನಾಗರಾಜ ಛಬ್ಬಿ, ಲಿಂಗಾಯತ ಮತಗಳನ್ನು ಕ್ರೂಡಿಕರಿಸಿಕೊಳ್ಳುವಲ್ಲಿ ಯಶಸ್ವೀಯಾಗಿದ್ದಾರೆ ಎಂದು ಹೇಳಲಾಗಿದ್ದು, ಸ್ವಲ್ಪ ಮಟ್ಟಿನ ಸಾಂಪ್ರದಾಯಿಕ ಮರಾಠಾ ಮತಗಳು ಬಿಜೆಪಿ ಪಾಲಾಗಿವೆ ಎನ್ನಲಾಗಿದೆ.

ಕಲಘಟಗಿ ಕ್ಷೇತ್ರದಲ್ಲಿಯೂ ಸಮಬಲದ ಹೋರಾಟ ನಡೆಯುವ ಸಾಧ್ಯತೆ ಹೆಚ್ಚಾಗಿದೆ. ಅಲ್ಲದೆ ಈ ಕಲಘಟಗಿ ಕ್ಷೇತ್ರದಲ್ಲಿ ಹೆಚ್ಚು ಲೀಡ್ ಕೊಡಿಸುವ ಜವಾಬ್ದಾರಿ ಹಾಗೂ ಪ್ರತಿಷ್ಟೆ ಸಚಿವ ಸಂತೋಷ ಲಾಡ್ ಹೆಗಲಿಗೆ ಇದೆ.

ವಿಧಾನಸಭೆ ಚುನಾವಣೆಗೊಮ್ಮೆ ಅಭ್ಯರ್ಥಿ ಬದಲಾಯಿಸುವ ಚಾಣಾಕ್ಷ ಮತದಾರರಿರುವ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಅಬ್ಬರದ ಪ್ರಚಾರ ನಡೆಸಿದ್ದರು ಸಹ ಬಿಜೆಪಿ ನಾಯಕರ ಆಂತರಿಕ ಕಚ್ಚಾಟ ಹಾಗೂ ಸ್ವ ಪ್ರತಿಷ್ಟೆ, ಪಕ್ಷಕ್ಕೆ ಕಂಟಕವಾಗುವ ಸಾಧ್ಯತೆ ಹೆಚ್ಚಾಗಿದೆ. ಕೆ ಪಿ ಸಿ ಸಿ ಕಾರ್ಯಾಧ್ಯಕ್ಷ ವಿನಯ ಕುಲಕರ್ಣಿ ಪ್ರತಿನಿಧಿಸುವ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ, ಕಾಂಗ್ರೇಸ್ ಅಭ್ಯರ್ಥಿಗೆ ಬಿಜೆಪಿಗಿಂತ ಹೆಚ್ಚಿನ ಮತಗಳು ಬರುವ ನಿರೀಕ್ಷೆ ಇದ್ದು, ಲಿಂಗಾಯತ ಮತಗಳ ಮೇಲೆ ಮಾಜಿ ಶಾಸಕ ಅಮೃತ ದೇಸಾಯಿ ಹಾಗು ಮಾಜಿ ಶಾಸಕಿ ಸೀಮಾ ಮಸೂತಿ ಪ್ರಭಾವ ಬೀರಿದ್ದಾರೆ. 

ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿಗಿಂತ ಕಾಂಗ್ರೇಸ್ ಉತ್ತಮ ಪ್ರದರ್ಶನ ಮಾಡಿದ್ದು, ಶಾಸಕ ವಿನಯ ಕುಲಕರ್ಣಿ ಧರ್ಮಪತ್ನಿ ಶಿವಲೀಲಾ ಕುಲಕರ್ಣಿ ಕ್ಷೇತ್ರದ ತುಂಬಾ ಓಡಾಡಿದ್ದಾರೆ. ಅಲ್ಲದೆ ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ಧಾರವಾಡ ಪಾಲಿಕೆಯ 9 ವಾರ್ಡಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೇಸ್ ನಡುವೆ ಸಮಬಲದ ಪೈಪೋಟಿ ಇದೆ.

ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ವಿನೋದ ಅಸೂಟಿ ತವರು ಕ್ಷೇತ್ರವಾಡ ನವಲಗುಂದ ಕ್ಷೇತ್ರದಲ್ಲಿ ಕಾಂಗ್ರೇಸ್ ಸಹಜವಾಗಿ ಹೆಚ್ಚು ಮತಗಳನ್ನು ಪಡೆಯಲಿದೆ. ಶಾಸಕರಾಗಿರುವ ಎನ್ ಎಚ್ ಕೋನರೆಡ್ಡಿ, ವಿನೋದ ಅಸೂಟಿ ಪರವಾಗಿ ಕ್ಷೇತ್ರದಾಧ್ಯಂತ ಸುತ್ತಾಡಿದ್ದು, ಕಾಂಗ್ರೇಸ್ ಅಭ್ಯರ್ಥಿಗೆ ಈ ಕ್ಷೇತ್ರದಲ್ಲಿ ಸುಮಾರು 25 ಸಾವಿರ ಲೀಡ್ ಸಿಗುವ ಸಾಧ್ಯತೆ ನಿಚ್ಚಳವಾಗಿದೆ. ಬಿಜೆಪಿಯ ಮಾಜಿ ಸಚಿವ ಶಂಕರ ಪಾಟೀಲ ಸಹ ಬಿಜೆಪಿ ಅಭ್ಯರ್ಥಿ ಪ್ರಲ್ಲಾದ ಜೋಶಿ ಪರವಾಗಿ ಓಡಾಡಿದ್ದು, ವಿಧಾನಸಭೆ ಚುನಾವಣೆಯಲ್ಲಿ ಪಡೆದಷ್ಟು ಮತ ಬಿಜೆಪಿ ಪಾಲಾಗಲಿವೆ. 

ರೈತ ಬಂಡಾಯದ ನಾಡು ನವಲಗುಂದ ಕ್ಷೇತ್ರದಲ್ಲಿ ಬಿಜೆಪಿಗೆ ಸಹಜವಾಗಿ ಹಿನ್ನೆಡೆಯಾಗಲಿದೆ. 

ಹುಬ್ಬಳ್ಳಿ ಪೂರ್ವ ಮೀಸಲು ಕ್ಷೇತ್ರದಲ್ಲಿ ಹ್ಯಾಟ್ರೀಕ್ ಗೆಲುವು ಸಾಧಿಸಿರುವ ಶಾಸಕ ಪ್ರಸಾದ ಅಬ್ಬಯ್ಯ, ತಮಗೆ ವಿಧಾನಸಭೆ ಚುನಾವಣೆಯಲ್ಲಿ ಬಂದ್ದಿದ್ದ ಮತಗಳಿಗಿಂತ ಹೆಚ್ಚು ಮತಗಳನ್ನು ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಈ ಕ್ಷೇತ್ರದಲ್ಲಿ ಮುಸ್ಲಿಂ ಮತಗಳು ನಿರ್ಣಾಯಕವಾಗಿದ್ದು, ಸಹಜವಾಗಿ ಕಾಂಗ್ರೇಸ್ ಪರ ವಾಲಲಿವೆ.

ಹುಬ್ಬಳ್ಳಿ ಪೂರ್ವ ಮೀಸಲು ಕ್ಷೇತ್ರದಲ್ಲಿ ಕಾಂಗ್ರೇಸ್ ನಾಯಕರು ಒಗ್ಗಟ್ಟಿನ ಪ್ರದರ್ಶನ ಮಾಡಿದ್ದು , ಮಾಜಿ ಸಚಿವ ಎ ಎಮ್ ಹಿಂಡಸಗೇರಿ ಸೇರಿದಂತೆ ಹಲವರು ಕೈ ಅಭ್ಯರ್ಥಿಗೆ ಹೆಚ್ಚು ಮತಗಳನ್ನು ತಂದು ಕೊಡಲಿದ್ದಾರೆ ಎಂದು ನೀರಿಕ್ಷಿಸಲಾಗಿದೆ. 

ಬಿಜೆಪಿ ಅಭ್ಯರ್ಥಿ ಪರವಾಗಿ ಡಾ, ಜೆಡಿಎಸ್ ನ ಪರಾಜಿತ ಅಭ್ಯರ್ಥಿ ಹಾಲಹರವಿ, ಬಿಜೆಪಿಯ ಪರಾಜಿತ ಅಭ್ಯರ್ಥಿ ಡಾ. ಕ್ರಾಂತಿಕಿರಣ ಓಡಾಡಿದ್ದು, ತಕ್ಕ ಮಟ್ಟಿಗೆ ಬಿಜೆಪಿಗೆ ಮತಗಳನ್ನು ತಂದುಕೊಡಲಿದ್ದಾರೆ. 

 

ಮಾಜಿ ಮುಖ್ಯಮಂತ್ರಿ, ಹಾಲಿ ಶಾಸಕ ಬಸವರಾಜ ಬೊಮ್ಮಾಯಿ ಪ್ರತಿನಿಧಿಸುವ ಶಿಗ್ಗಾವ್ ಮತಕ್ಷೇತ್ರದಲ್ಲಿ ಮುಸ್ಲಿಮ್ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದ್ದು, ಈ ಕ್ಷೇತ್ರದಲ್ಲಿ ಕಾಂಗ್ರೇಸ್ ಗೆ ಹೆಚ್ಚು ಮತಗಳು ಬರುವ ನಿರೀಕ್ಷೆ ಇದೆ. ವಿಧಾನಸಭೆ ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ ಈ ಕ್ಷೇತ್ರದಲ್ಲಿ ಸತತವಾಗಿ ಗೆಲ್ಲುತ್ತ ಬಂದಿದ್ದರು ಸಹ ಈ ಬಾರಿ ಆ ಮತಗಳು ಕಾಂಗ್ರೇಸ್ ಪರ ಬರಲಿವೆ ಅನ್ನೋ ಅಭಿಪ್ರಾಯ ಕೇಳಿ ಬರುತ್ತಿದೆ. ಶಿಗ್ಗಾವ ಕ್ಷೇತ್ರದಲ್ಲಿ ಕಾಂಗ್ರೇಸ್ ಪರಾಜಿತ ಅಭ್ಯರ್ಥಿ ಯಾಸಿರ್ ಖಾನ್ ಪಠಾಣ, ಮಾಜಿ ಶಾಸಕ ಅಜಮ್ ಪೀರ್ ಖಾದ್ರಿ ಇಬ್ಬರ ನಡುವೆ ರಾಜಕೀಯ ವೈಮನಸ್ಸು ಇದ್ದರು ಸಹ ಇಬ್ಬರು ಕಾಂಗ್ರೇಸ್ ಅಭ್ಯರ್ಥಿ ಪರ ಹೆಚ್ಚಿನ ಮತಗಳನ್ನು ಸೆಳೆಯಲಿದ್ದಾರೆ ಎನ್ನಲಾಗಿದೆ. ಶಿಗ್ಗಾವ್ ಕ್ಷೇತ್ರದಲ್ಲಿ ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಪ್ರಭಾವವಿದ್ದು, ಪಂಚಮಸಾಲಿ ಮತಗಳು ಈ ಬಾರಿ ಕಾಂಗ್ರೇಸ್ ಅಭ್ಯರ್ಥಿ ಕೈ ಹಿಡಿಯಲಿವೆ ಎನ್ನಲಾಗಿದೆ. 

ಒಟ್ಟಾರೆ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿಯ ಲೋಕಸಭಾ ಕ್ಷೇತ್ರದ ಚುನಾವಣೆ ಜಿದ್ದಾಜಿದ್ದಿನಿಂದ ಕೂಡಿದ್ದು, ವಿನೋದ ಅಸೂಟಿ ಹಾಗೂ ಪ್ರಲ್ಲಾದ ಜೋಶಿ ನಡುವೆ ಸಮೀಪದ ಸ್ಪರ್ಧೆ ನಡೆದಿದೆ. ಕರ್ನಾಟಕ ಫೈಲ್ಸ್ ಗೆ ಸಿಕ್ಕಂತ ಮಾಹಿತಿ ಪ್ರಕಾರ ಗೆಲುವಿನ ಅಂತರ 5 ಸಾವಿರ ಅಂಕಿಯ ಒಳಗಡೆ ಇದೆ. 

ಬಿಜೆಪಿ ಅಭ್ಯರ್ಥಿ ಪ್ರಲ್ಲಾದ ಜೋಶಿ 2 ಲಕ್ಷ ಅಂತರದಿಂದ ಗೆಲ್ಲುವ ನಿರೀಕ್ಷೆಯಲ್ಲಿದ್ದರೆ, ಗ್ಯಾರೆಂಟಿ ಹೊಡೆತ ಆ ನಿರೀಕ್ಷೆಯನ್ನು ಹುಸಿಗೊಳಿಸಲಿದೆ. ಅಲ್ಲದೆ ಕಾಂಗ್ರೇಸ್ ಅಭ್ಯರ್ಥಿ ವಿನೋದ ಅಸೂಟಿ 1 ಲಕ್ಷ ಮತಗಳ ಅಂತರದಿಂದ ಗೆಲವಿನ ನಿರೀಕ್ಷೆಯಲ್ಲಿದ್ದು, ಗೃಹಲಕ್ಷ್ಮಿಯರ ಮತಗಳ ಮೇಲೆ ಗೆಲುವು ನಿಂತಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಸಾಮಾಜಿಕ ಜಾಲತಾಣದಲ್ಲಿ ಹವಾ ಸೃಷ್ಟಿಸಿದ ನವಲಗುಂದ ಕ್ಷೇತ್ರದ ಮುಂದಿನ ಶಾಸಕರು……

ವಿಧಾನಸಭಾ ಚುನಾವಣೆಗೆ ಇನ್ನು ಮೂರು ವರ್ಷ ಬಾಕಿ ಇರುತ್ತಿದ್ದಂತೆ, ನವಲಗುಂದ ಕ್ಷೇತ್ರದ ಮುಂದಿನ ಶಾಸಕರು ಎಂಬ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹವಾ ಸೃಷ್ಟಿಸಿದೆ.  ಇಷ್ಟು ದಿನ

Live Cricket

error: Content is protected !!