ರೈತರಿಗೆ ಬರ ಪರಿಹಾರ ಬಿಡುಗಡೆ ವಿಷಯವಾಗಿ ವಿಪಕ್ಷ ನಾಯಕ ಆರ್ ಅಶೋಕ, ಸರ್ಕಾರದ ವಿರುದ್ಧ ದಾಳ ಉರುಳಿಸಿದ್ದಾರೆ. ನವಲಗುಂದ ಕ್ಷೇತ್ರದ ಕಾಂಗ್ರೇಸ್ ಶಾಸಕ ಎನ್ ಎಚ್ ಕೋನರೆಡ್ಡಿ, ಬರ ಪರಿಹಾರದ ವಿಷಯವಾಗಿ ಅಸಮಾಧಾನ ತೋಡಿಕೊಂಡಿದ್ದನ್ನೇ ಅಸ್ತ್ರವಾಗಿ ಬಳಸಿಕೊಂಡಿದ್ದಾರೆ.
ನವಲಗುಂದ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾದ ಶ್ರೀ ಎನ್.ಎಚ್.ಕೋನರೆಡ್ಡಿ ಅವರು ತಮ್ಮ ಕ್ಷೇತ್ರದಲ್ಲಿ ಇನ್ನೂ ಕೆಲವು ರೈತರಿಗೆ ಬರ ಪರಿಹಾರ ವಿತರಣೆ ಆಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ ಎಂದು ಅಶೋಕ ತಿಳಿಸಿದ್ದಾರೆ.
ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎನ್ನುವಂತೆ, ರಾಜ್ಯ ಕಾಂಗ್ರೇಸ್ ಸರ್ಕಾರಕ್ಕೆ, ರೈತರಿಗೆ ಬರ ಪರಿಹಾರ ನೀಡುವ ಯೋಗ್ಯತೆ ಇಲ್ಲ ಎಂದು ವಿಪಕ್ಷ ನಾಯಕ ಆರ್ ಅಶೋಕ ಹರಿಹಾಯ್ದಿದ್ದಾರೆ.
ಕನಿಷ್ಠ ಪಕ್ಷ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೀಡಿರುವ ₹3,454 ಕೋಟಿ ರೂಪಾಯಿ ಬರ ಪರಿಹಾರವನ್ನಾದರೂ ರೈತರಿಗೆ ವಿತರಣೆ ಮಾಡಿ ಅಂದರೆ ಅದೂ ನಿಮ್ಮ ಕೈಯಲ್ಲಿ ಆಗುತ್ತಿಲ್ಲ ಎಂದು ಕಿಡಿ ಕಾರಿದ್ದಾರೆ.
ರೈತರ ಕಷ್ಟಕ್ಕೆ ಸ್ಪಂದಿಸಲಾಗದ ಸರ್ಕಾರ ಇದ್ದರೆಷ್ಟು ಹೋದರೆಷ್ಟು. ಬರ ಪರಿಹಾರ ಸಮಯಕ್ಕೆ ಸರಿಯಾಗಿ ರೈತರ ಕೈಸೇರುವಂತೆ ನೋಡಿಕೊಳ್ಳಲು ಆಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ಅದು ಬಿಟ್ಟು ರೈತರ ಬದುಕಿನ ಜೊತೆ ಚೆಲ್ಲಾಟವಾಡಬೇಡಿ ಎಂದು ಆರ್ ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
