ನಾಲ್ಕು ರಾಜ್ಯದ ಲಕ್ಷಾಂತರ ಭಕ್ತರ ಆರಾಧ್ಯ ದೈವ ನವಲಗುಂದದ ರಾಮಲಿಂಗ ಕಾಮಣ್ಣ ಅವ್ಯವಹಾರ ಕುರಿತಂತೆ ಧಾರವಾಡ ಜಿಲ್ಲಾಡಳಿತ ತನಿಖೆಗೆ ಮುಂದಾಗಿದೆ.
ಹೋಳಿ ಹುಣ್ಣಿಮೆಗೆ ಪ್ರತಿಷ್ಟಾಪನೆಯಾಗುವ ರಾಮಲಿಂಗ ಕಾಮಣ್ಣನ ದರ್ಶನ ಪಡೆಯಲು ಪ್ರತಿ ವರ್ಷ 5 ಲಕ್ಷ ಜನ ಬರುತ್ತಾರೆ. ಬಂದವರು ಲಕ್ಷಾಂತರ ರೂಪಾಯಿ ಕಾಣಿಕೆ ರೂಪದಲ್ಲಿ ಹಣ, ಬಂಗಾರ, ಬೆಳ್ಳಿ ಆಭರಣ ಕೊಡುತ್ತಾರೆ.
ಪ್ರತಿ ವರ್ಷ ಭಕ್ತರಿಂದ ಎರಡು ಕೋಟಿಗೂ ಹೆಚ್ಚು ಹಣ ಸಂಗ್ರಹವಾಗುತ್ತದೆ. ಭಕ್ತರು ನೀಡಿದ ಹಣವನ್ನು ರಾಮಲಿಂಗ ದೇವಸ್ಥಾನಕ್ಕೆ ಉಪಯೋಗಿಸದೆ, ಆ ಹಣವನ್ನು ಕೆಲವರು ಬಡ್ಡಿ ದಂಧೆಗೆ, ಕೆಲವರು ಉಸುಕಿನ ದಂಧೆಗೆ ಬಳಸಿಕೊಂಡು ದುರ್ಬಳಿಕೆ ಮಾಡಿಕೊಂಡಿದ್ದಾರೆ ಎಂದು ಅಪ್ಪಣ್ಣ ಹಳ್ಳದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿತ್ತು.
ನವಲಗುಂದದ ಹಿರಿಯರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ರಾಮಲಿಂಗ ಕಾಮಣ್ಣನ ದೇವಸ್ಥಾನದಲ್ಲಿ ನಡೆದ ಅವ್ಯವಹಾರದ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿದ್ದರು.
ಅಲ್ಲದೇ ಈ ರಾಮಲಿಂಗ ಕಾಮಣ್ಣನ ದೇವಸ್ಥಾನವನ್ನು ಸರ್ಕಾರ ವಶಪಡಿಸಿಕೊಂಡು, ಮುಜರಾಯಿ ಇಲಾಖೆಗೆ ವಹಿಸಬೇಕೆಂದು ಆಗ್ರಹಿಸಿದ್ದರು
ರಾಮಲಿಂಗ ಕಾಮಣ್ಣನ ದೇವಸ್ಥಾನದಲ್ಲಿ ನಡೆದ ಅವ್ಯವಹಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿಗಳು, ತನಿಖೆ ನಡೆಸುವಂತೆ ಉಪ ವಿಭಾಗಾಧಿಕಾರಿಗಳಿಗೆ ಸೂಚಿಸಿದ್ದಾರೆ.
ರಾಮಲಿಂಗ ಕಾಮಣ್ಣನ ಹಣ ಕೊಳ್ಳೆ ಹೊಡೆದವರಿಗೆ ಇದೀಗ ಸಂಕಷ್ಟ ಎದುರಾಗಿದ್ದು, ಪೈಸೆ ಪೈಸೆ ಲೆಕ್ಕ ಸಿಗದಿದ್ದಲ್ಲಿ, ಆಡಳಿತ ಮಂಡಳಿ ಸದಸ್ಯರ ವಿರುದ್ಧ ಕ್ರಿಮಿನಲ್ ಕೇಸ್ ಧಾಖಲಾಗುವ ಸಾಧ್ಯತೆ ಇದೆ.