ರಾಜ್ಯದಲ್ಲಿ 1.40 ಕೋಟಿ ಎಕರೆ ಸರ್ಕಾರಿ ಜಮೀನು ಇದ್ದು, ಲ್ಯಾಂಡ್ ಬೀಟ್ ಮೊಬೈಲ್ ತಂತ್ರಾಂಶದ ಮೂಲಕ ದತ್ತಾಂಶ ಸೃಜಿಸಲಾಗಿದೆ. 14.32 ಲಕ್ಷ ಸರ್ಕಾರಿ ಜಮೀನುಗಳ ಸ್ಥಳ ಪರಿಶೀಲನೆಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಪೈಕಿ 10.78 ಲಕ್ಷ ಜಮೀನುಗಳಿಗೆ ಗ್ರಾಮಲೆಕ್ಕಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇದರಲ್ಲಿ ಕಂದಾಯ ಇಲಾಖೆಯ 1.93 ಲಕ್ಷ ಜಮೀನುಗಳು ಇದ್ದು, ವಿವಿಧ 20 ಇಲಾಖೆಗಳ ಜಮೀನುಗಳನ್ನೂ ಗುರುತಿಸಲಾಗಿದೆ. ಕೆರೆ ಮತ್ತು ಸ್ಮಶಾನಗಳ ಹೆಚ್ಚುವರಿ ಜವಾಬ್ದಾರಿ ತೆಗೆದುಕೊಂಡು, ಸಮೀಕ್ಷೆ ನಡೆಸಲಾಗಿದೆ.
ಒಟ್ಟು 91,000 ಜಮೀನುಗಳು ಒತ್ತವರಿಯಾಗಿರುವುದನ್ನು ಗುರುತಿಸಲಾಗಿದೆ. ಆಗಸ್ಟ್ ತಿಂಗಳಿನಿಂದ ಸರ್ವೇಯರುಗಳ ಲಭ್ಯತೆ ನೋಡಿಕೊಂಡು ಒತ್ತುವರಿ ತೆರವು ಮಾಡಲು ಕ್ರಮ ಕೈಗೊಳ್ಳಲಾಗುವುದು ಸರ್ಕಾರ ಹೇಳಿದೆ.
ವಖ್ಫ್ ಇಲಾಖೆ ಸೇರಿದಂತೆ ಇತರ ಇಲಾಖೆಯವರೂ ಸಹ ತಮ್ಮ ಜಮೀನು ಎಲ್ಲಿದೆ? ಹಾಗೂ ಒತ್ತುವರಿಯಾಗಿದೆಯೇ ಎ೦ಬ ಕುರಿತು ಪರಿಶೀಲಿಸಲು ಅವಕಾಶವಿದೆ. ವಿವಿಧ ಇಲಾಖೆಗಳ ಆಸ್ತಿ ರಕ್ಷಣೆಗೆ ಎಸ್ಟೇಟ್ ಅಧಿಕಾರಿಗಳನ್ನು ನೇಮಕ ಮಾಡಬೇಕು. ತಮ್ಮ ಇಲಾಖೆಗೆ ಹಂಚಿಕೆಯಾದ ಭೂಮಿಯ ಮಾಹಿತಿಯನ್ನು ಆರ್.ಟಿ.ಸಿ.ಯಲ್ಲಿ ಸೇರಿಸಬೇಕು. ಹಾಗೂ ಒತ್ತುವರಿ ತೆರವುಗೊಳಿಸಿ, ತಮ್ಮ ಆಸ್ತಿಯನ್ನು ಸಂರಕ್ಷಿಸಬೇಕು ಎಂದು ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಸರ್ಕಾರಿ ಜಮೀನು ಒತ್ತುವರಿಯನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.