ಶೈಕ್ಷಣಿಕ ಕಾಶಿ, ನಿವೃತ್ತರ ಸ್ವರ್ಗ ಎಂದು ಕರೆಸಿಕೊಳ್ಳುವ ಧಾರವಾಡ ಸುಸಂಸ್ಕೃತ ಮತ್ತು ಶಾಂತಿ ಪ್ರಿಯರ ನಗರ.
ಇಂತಹ ನಗರದಲ್ಲಿ ಕೆಲವು ಏರಿಯಾಗಳಲ್ಲಿ ಇರುವ ಮಕ್ಕಳು ದಾರಿ ತಪ್ಪುತ್ತಿದ್ದಾರೆ. ಅಡ್ಡ ಕಸುಬಿ ದಂಧೆಗೆ ಇಳಿದಿದ್ದಾರೆ. ದಿಡೀರನೆ ಶ್ರೀಮಂತರಾಗುವ, ನಗರದಲ್ಲಿ ಹವಾ ಸೃಷ್ಟಿಸುವ, ದಾದಾಗಿರಿ ಮಾಡುವ ಉದ್ದೇಶದಿಂದ ಕ್ರೈಮ್ ಲೋಕಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
ನಶೆ ಏರಿಸಿಕೊಂಡು, ದುಶ್ಚಟಗಳ ದಾಸರಾಗಿರುವ ಯುವಕರನ್ನು ಎಚ್ಚರಿಸುವ ಕೆಲಸವನ್ನು ನೂತನ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ ಅವರು ಆರಂಭದಿಂದಲೂ ಮಾಡುತ್ತಾ ಬಂದಿದ್ದಾರೆ. ಗಾಂಜಾ ವ್ಯಸನಿಗಳನ್ನು ಹಿಡಿದು, ಅವರ ಪಾಲಕರ ಎದುರೆ ಬುದ್ದಿ ಹೇಳಿದ್ದಾರೆ.
ಹುಬ್ಬಳ್ಳಿ ಧಾರವಾಡ ಎರಡು ಮಹಾನಗರಗಳನ್ನು ನಶೆ ಮುಕ್ತ, ಮತ್ತು ಕ್ರೈಮ್ ಮುಕ್ತ ನಗರ ಮಾಡಲು ಕಮಿಷನರ್ ಅವರು ಹಗಲು ರಾತ್ರಿ ಓಡಾಡುತ್ತಿದ್ದರು, ಧಾರವಾಡದ ಕೆಲ ಏರಿಯಾಗಳಲ್ಲಿ ವಾಸಿಸುವ ಒಂದಿಷ್ಟು ಯುವಕರು ಕ್ರೈಮ್ ಲೋಕಕ್ಕೆ ಹೆಚ್ಚು ಹತ್ತಿರವಾಗುತ್ತಿದ್ದಾರೆ. ಇಂತಹವರ ಹೆಡಮುರಿಗೆ ಕಟ್ಟಲು ಖಡಕ್ ಪೋಲೀಸ್ ಕಮೀಷನರ್ ಫಿಲ್ಡ್ ಗೆ ಇಳಿದಿದ್ದಾರೆ.
ನಗರದಲ್ಲಿ ಹವಾ ಸೃಷ್ಟಿಸುವ, ಹಫ್ತಾ ವಸೂಲಿ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ. 18 ರಿಂದ 20 ವಯಸ್ಸಿನ ಯುವಕರ ಕೈಯಲ್ಲಿ ಚಾಕು, ಚೂರಿಗಳು ಕಾಣಿಸುತ್ತಿವೆ.
ಭಯ ಹುಟ್ಟಿಸುತ್ತಿವೆ ಇನ್ಸ್ಟಾಗ್ರಾಮ್ ರೀಲ್ಸ್ ಗಳು
ಎರಡು ದಿನಗಳ ಹಿಂದೆ ಧಾರವಾಡದ ರಸೂಲಪುರ ಓಣಿಯಲ್ಲಿ ನಡೆದ ಘಟನೆಯಲ್ಲಿ ಭಾಗವಹಿಸಿದವರ ಇನ್ಸ್ಟಾಗ್ರಾಮ್ ರೀಲ್ಸ್ ಗಳು ಭಯಾನಕವಾಗಿವೆ. ಇನ್ಸ್ಟಾಗ್ರಾಮ್ ರೀಲ್ಸ್ ನಲ್ಲಿ ಕೈಯಲ್ಲಿ ಮಚ್ಚು, ಲಾಂಗೂ ಹಿಡಿದು, ಡೈಲಾಗ್ ಹೊಡೆಯುವ ವಿಡಿಯೋ ತುಣುಕುಗಳು ಭಯ ಹುಟ್ಟಿಸಿವೆ.
ಧಾರವಾಡದ ರಸೂಲಪುರದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ 7 ಜನರನ್ನು ಧಾರವಾಡ ಶಹರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಧಾರವಾಡ ಮತ್ತೆ ನೆಮ್ಮದಿಯತ್ತ ಮುಖ ಮಾಡಬೇಕಿದೆ. ಆಯಾ ಏರಿಯಾಗಳಲ್ಲಿ ಪೊಲೀಸರಿಗಿಂತ ಅಲ್ಲಿನ ಜನ ಮಕ್ಕಳು ದಾರಿ ತಪ್ಪದಂತೆ ನೋಡಿಕೊಳ್ಳಬೇಕಾಗಿದೆ.