ನವಲಗುಂದ ಗುಡ್ಡದ ಅನಧಿಕೃತ ಅಗೆತದ ವಿಷಯವಾಗಿ ನವಲಗುಂದದಲ್ಲಿ ಪರ ವಿರೋದದ ರಾಜಕೀಯ ಚಟುವಟಿಕೆಗಳು ಜೋರಾಗಿವೆ.
ಗಣಿ ಹಾಗೂ ಭೂ ವಿಜ್ಞಾನ ಇಲಾಖೆಯ ಅನುಮತಿ ಪಡೆಯದೇ ಅನಧಿಕೃತವಾಗಿ ಗುಡ್ಡ ಅಗೆಯಲಾಗುತ್ತಿದೆ ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಆರೋಪಿಸಿದ ಬೆನ್ನಲ್ಲೇ, ಯುವಕರ ಪಡೆಯೊಂದು ಗುಡ್ಡದ ರಕ್ಷಣೆ ನಮ್ಮ ಹೊಣೆ ಎಂಬ ಸಂಘಟನೆಯೊಂದು ಇಂದು ತಹಸೀಲ್ದಾರ ಹಾಗು ಪುರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಅನಧಿಕೃತವಾಗಿ ಗುಡ್ಡ ಅಗೆಯುತ್ತಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದ್ದಾರೆ.
ಇದೆಲ್ಲದರ ಬೆಳವಣಿಗೆ ಮಧ್ಯೆ ಶಾಸಕ ಎನ್ ಎಚ್ ಕೋನರೆಡ್ಡಿ, ಗುಡ್ಡದ ಮಣ್ಣಿನ ಬಳಕೆಗೆ ಸಂಬಂಧಿಸಿದಂತೆ, ಊರಿನ ಚಾವಡಿಯಲ್ಲಿ ನವಲಗುಂದ ರೈತರ ಸಭೆ ನಡೆಸಿದ್ದಾರೆ.
ನವಲಗುಂದದ ರೈತರ ಹೊಲಗಳ ರಸ್ತೆ ಅಭಿವೃದ್ಧಿಗೆ ಗುಡ್ಡದ ಮಣ್ಣನ್ನು ಬಳಸಿಕೊಳ್ಳಲಾಗುತ್ತಿದೆ. ಬೇಡ ಅಂದರೆ ಕಾಮಗಾರಿ ನಿಲ್ಲಿಸುವದಾಗಿ ಶಾಸಕ ಎನ್ ಎಚ್ ಕೋನರೆಡ್ಡಿ ಹೇಳಿದ್ದಾರೆ.
ಸಭೆಯಲ್ಲಿದ್ದ ನವಲಗುಂದ ಪುರಸಭೆಯ ಸದಸ್ಯರು, ಗುಡ್ಡದ ಮಣ್ಣನ್ನು ಬಳಸಿಕೊಳ್ಳಲು ಯಾವದೇ ಅಭ್ಯಂತರವಿಲ್ಲ. ಗುಡ್ಡದ ಮಣ್ಣನ್ನು ಬಳಸಿಕೊಳ್ಳಲು ಸೋಮವಾರ ಪುರಸಭೆಯಲ್ಲಿ ಠರಾವು ಪಾಸು ಮಾಡಿಕೊಡಲಾಗುವದು ಎಂದು ಹೇಳಿದ್ದಾರೆ.
ನವಲಗುಂದ ಗುಡ್ಡದ ವಿಷಯ ಇದೀಗ ರಾಜಕೀಯದ ಸುತ್ತ ಗಿರಕಿ ಹೊಡೆಯುತ್ತಿದ್ದು, ಪರ ವಿರೋಧಗಳು ಬಿರುಸುಗೊಂಡಿವೆ.
ಗಣಿ ಹಾಗೂ ಭೂ ವಿಜ್ಞಾನ ಇಲಾಖೆಯ ಅನುಮತಿ ಪಡೆದುಕೊಳ್ಳದೆ, ಗುಡ್ಡ ಅಗೆಯುತ್ತಿರುವದರಿಂದ ಸರ್ಕಾರಕ್ಕೆ ರಾಜಸ್ವ ಸಂಗ್ರಹಕ್ಕೆ ಪೆಟ್ಟು ಬಿದ್ದಿದೆ ಅನ್ನೋದು ಕೆಲವರ ವಾದವಾಗಿದೆ.
ನವಲಗುಂದ ಗುಡ್ಡದ ವಿಚಾರದಲ್ಲಿ ಕಾನೂನು ಉಲ್ಲಂಘನೆಯಾಗಿದೆ. ಹಾಗೇ ನಮ್ಮ ಹೊಲ ನಮ್ಮ ರಸ್ತೆ ಕಾನೂನುಬಾಹಿರ ಕಾಮಗಾರಿಯ ಬಗ್ಗೆ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಕಾನೂನು ಹೋರಾಟ ಮಾಡುವದಾಗಿ ಹೇಳಿದ್ದಾರೆ.
ಪಾರಂಪರಿಕ ಗುಡ್ಡದ ಮಣ್ಣನ್ನ ತೆಗೆದು ನಗರೋತ್ಥಾನ ರಸ್ತೆ ನಿರ್ಮಾಣ ಪುರಸಭೆಯಿಂದ 60 ಲಕ್ಷ ರೂಪಾಯಿ ಹಣವನ್ನ ತೆಗೆಯಲು ಮುಂದಾಗಿರುವುದು ರಹಸ್ಯವಾಗಿ ಉಳಿದಿಲ್ಲ ಅನ್ನೋ ಮಾತುಗಳು ಕೇಳಿ ಬಂದಿವೆ.
