ಹೇಳಿ ಕೇಳಿ ನವಲಗುಂದ ರೈತ ಬಂಡಾಯದ ನೆಲ. ಆ ನೆಲದಲ್ಲಿ ರೈತ ಹೋರಾಟಗಳು ರಾಜ್ಯ ರಾಜಕೀಯ ಚಿತ್ರಣವನ್ನೇ ಬದಲಾವಣೆ ಮಾಡಿದ ಉಧಾಹರಣೆಗಳಿವೆ.
1980 ರ ಜುಲೈ 21 ರಂದು ನಡೆದ ರೈತ ಬಂಡಾಯ ಆಗಿನ ಗುಂಡುರಾವ ಸರ್ಕಾರವನ್ನು ರೈತರೆದುರು ಮಡ್ಡಿ ಊರುವಂತೆ ಮಾಡಿತ್ತು. ನಂತರ ರಾಜ್ಯದಲ್ಲಿ ಕಾಂಗ್ರೇಸ್ಸೇತರ ಸರ್ಕಾರಗಳು ಅಧಿಕಾರಕ್ಕೆ ಬರಲು ರೈತ ಬಂಡಾಯ ಕಾರಣವಾಯ್ತು.
ಕಳಸಾ ಬಂಡೋರಿ, ಮಹಾದಾಯಿಗಾಗಿ ಈಗಲೂ ರೈತ ಬಂಡಾಯದ ನೆಲ ಸದ್ದು ಮಾಡುತ್ತಿದೆ. ಇದೆಲ್ಲದರ ನಡುವೆ ನವಲಗುಂದ ಶಾಸಕ ಎನ್ ಎಚ್ ಕೋನರೆಡ್ಡಿಯವರ “ಆ” ಫೋಟೋ ಒಂದು ನವಲಗುಂದ ತಾಲೂಕಿನಲ್ಲಿ ಸಖತ್ ಸದ್ದು ಮಾಡುತ್ತಿದೆ.
ನವಲಗುಂದ ಗುಡ್ಡದ ಮಣ್ಣನ್ನು ಅನಧಿಕೃತವಾಗಿ ಬಳಕೆ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಆರೋಪಿಸಿ, ಸಮರ ಸಾರಿದ ಬಳಿಕ, ಕೇಂದ್ರ ಸಚಿವ ಪ್ರಲ್ಲಾದ ಜೋಶಿ ಹಾಗೂ. ಎನ್ ಎಚ್ ಕೋನರೆಡ್ಡಿಯವರು ಹೊಲದ ರಸ್ತೆ ವೀಕ್ಷಣೆ ಮಾಡುತ್ತಿರುವ ಫೋಟೋ ವೈರಲ್ ಆಗಿದೆ.
ಈ ಫೋಟೋ ಲೋಕಸಭಾ ಚುನಾವಣೆಗೂ ಮುನ್ನ ಅಳಗವಾಡಿ ಹಾಗೂ ತಿರ್ಲಾಪುರದಲ್ಲಿ ಜೋಶಿಯವರ ಅನುದಾನದಲ್ಲಿ ಶಾಲಾ ಕಟ್ಟಡಗಳ ನವಿಕರಣದ ಉದ್ಘಾಟನೆ ಸಂದರ್ಭದಲ್ಲಿ ಮಾರ್ಗ ಮಧ್ಯೆ ತೆಗೆದ ಫೋಟೋ ಆಗಿದೆ.
ಈ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಕೇಂದ್ರ ಸಚಿವರು ಹೊಲದ ರಸ್ತೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎನ್ನುವ ಸಂದೇಶ ಹರಿಬಿಡಲಾಗಿದೆ.
ಯಮನೂರು ಹಾಗೂ ತಿರ್ಲಾಪುರ ನಡುವೆ ನಿರ್ಮಾಣವಾದ ಹೊಲದ ರಸ್ತೆಯನ್ನು ಶಾಸಕ ಕೋನರೆಡ್ಡಿಯವರು ಕೇಂದ್ರ ಸಚಿವರಿಗೆ ತೋರಿಸಿ, ಮತ್ತಷ್ಟು ಅನುದಾನಕ್ಕೆ ಜೋಶಿಯವರಿಗೆ ಮನವಿ ಮಾಡಿದ್ದರು ಎನ್ನಲಾಗಿದೆ.
