ನವಲಗುಂದ ತಾಲೂಕಿನ ಅಣ್ಣಿಗೇರಿಯಲ್ಲಿ ರಾಜ್ಯ ಉಗ್ರಾಣ ನಿಗಮದಲ್ಲಿದ್ದ ಕಡ್ಲಿ, ಹೆಸರು ಕಾಳಿನ ಚೀಲಗಳು ಕಳ್ಳತನವಾಗಿರುವ ಸುದ್ದಿ, ನವಲಗುಂದ ತಾಲೂಕಿನಲ್ಲಿ ಕೋಲಾಹಲ ಸೃಷ್ಟಿಸಿದೆ.
ಅಣ್ಣಿಗೇರಿ ಗುದಾಮ ನಲ್ಲಿ ಶೇಖರಣೆ ಮಾಡಲಾಗಿದ್ದ ರೈತರ ಕಡ್ಲಿ, ಹೆಸರು ಕಾಳಿನ ಚೀಲಗಳು, ನೋಡು ನೋಡುತ್ತಿದ್ದಂತೆ ಕಣ್ಮರೆಯಾಗಿರುವದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.
ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಣ್ಣಿಗೇರಿಯಲ್ಲಿ ನಾಲ್ಕು ದಿನಗಳಿಂದ ರೈತ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಳ್ಳತನ ಭೇಧಿಸಿ ನ್ಯಾಯ ಕೊಡುವಂತೆ ಆಗ್ರಹಿಸಿದ್ದಾರೆ.
ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಷಣ್ಮುಖ ಗುರಿಕಾರ, ಶಿವಾನಂದ ಕರಿಗಾರ, ಹನುಮಂತಪ್ಪ ಕಂಬಳಿ, ಸಿದ್ದು ತೇಜಿ ಸೇರಿದಂತೆ ರಾಜಕೀಯ ನಾಯಕರು ಕಳ್ಳತನ, ರಾಜಕೀಯ ನಂಟಿಲ್ಲದೆ ನಡೆದಿಲ್ಲ ಎಂದು ಆರೋಪಿಸಿದ್ದಾರೆ.
ಈ ಮೊದಲು, ರೈತರಿಗೆ ಅನ್ಯಾಯ ಆಗಿದೆ ಅನ್ನೋ ಸುದ್ದಿ ಕಿವಿಗೆ ಬೀಳುತ್ತಿದ್ದಂತೆ, ಹೆಗಲಿಗೆ ಹಸಿರು ಟವೆಲ್ ಹಾಕಿ, ಹಾದಿ ರಂಪಾಟ ಮಾಡುತ್ತಿದ್ದ ನಾಯಕ ತುಟಿ ಬಿಚ್ಚದಿರುವದು ಸಂಶಯಕ್ಕೆಡೆ ಮಾಡಿದೆ.
ಗುದಾಮದಲ್ಲಿದ್ದ ಕಡ್ಲಿ ಮತ್ತು ಹೆಸರಿನ ಕಾಳುಗಳ ಚೀಲದ ಮೇಲೆ ರೆಡ್ಡಿ ಬ್ಯಾಂಕನಿಂದ, ಉಗ್ರಾಣ ನಿಗಮದ ಅಧಿಕಾರಿ 40 ಲಕ್ಷ ಸಾಲ ಪಡೆದಿದ್ದಾರೆ ಎನ್ನಲಾಗಿದೆ.
ಮೊದಲಿಗೆ 4 ಸಾವಿರ ಚೀಲ ಕಳ್ಳತನವಾಗಿದೆ ಎಂದು ಕೇಳಿ ಬಂದಿತ್ತಾದರು, ಇದೀಗ ಕೇವಲ 7 ರೈತರು ಇಟ್ಟಿದ್ದ 17 ನೂರು ಚೀಲಗಳು ಮಾತ್ರ ಕಳ್ಳತನವಾಗಿವೆ ಎಂಬ ಲೆಕ್ಕ ತೋರಿಸಲಾಗುತ್ತಿದೆ ಎನ್ನಲಾಗಿದೆ.
ಇಂದು ಅಣ್ಣಿಗೇರಿಗೆ, ಜಿಲ್ಲಾಧಿಕಾರಿ ಜೊತೆ ಭೇಟಿ ನೀಡಿದ್ದ ನವಲಗುಂದ ಶಾಸಕ ಎನ್ ಎಚ್ ಕೋನರೆಡ್ಡಿಯವರ ಎದುರು, ಕೆಲ ಹೊತ್ತು ವಾಕ್ಸಮರ ನಡೆದಿದೆ.
ಅವರದೇ ಪಕ್ಷದ ನಾಯಕರಾದ ಶಿವಾನಂದ ಕರಿಗಾರ ಮಾತನಾಡಿ, ಈ ಕಳ್ಳತನದ ಹಿಂದೆ ರಾಜಕೀಯ ನಂಟಿದೆ ಎಂದು ಆರೋಪಿಸಿದ್ದಾರೆ. ಮತ್ತೊಬ್ಬ ಮುಖಂಡ ಹನುಮಂತಪ್ಪ ಕಂಬಳಿ ಮಾತನಾಡಿ, ಹೆಸರು ಖರೀದಿ ಕೇಂದ್ರ ಆರಂಭವಾಗದಿರುವದನ್ನು ಜಿಲ್ಲಾಧಿಕಾರಿಗಳಿಗೆ ಗಮನಕ್ಕೆ ತಂದಿದ್ದಾರೆ. ಈ ವೇಳೆ ಕಂಬಳಿ ಹಾಗೂ ಕೋನರೆಡ್ಡಿಯವರ ನಡುವೆ ಮಾತಿನ ಚಕಮಕಿ ನಡೆದಿದೆ.
ಒಟ್ಟಾರೆ ಕಡ್ಲಿ ಹಾಗೂ ಹೆಸರು ಕಳ್ಳತನ ಪ್ರಕರಣ ರಾಜಕೀಯ ಸದ್ದು ಮಾಡುತ್ತಿದ್ದು, ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಉಗ್ರಾಣದ ಮ್ಯಾನೇಜರ ಮುಶಣ್ಣವರ ಮಾತ್ರ ಅಸಲಿ ವಿಷಯ ಹೊರ ಹಾಕಬೇಕಿದೆ.