ನವಲಗುಂದ ವಿಧಾನಸಭಾ ವ್ಯಾಪ್ತಿಯಲ್ಲಿ ನಡೆದ ನಮ್ಮ ಹೊಲ ನಮ್ಮ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಮನಸೋ ಇಚ್ಛೆ ಬಿಲ್ ತೆಗೆದುಕೊಂಡಿದ್ದರ ಬಗ್ಗೆ ಮಾಹಿತಿ ಹೊರಬಿದ್ದಿದೆ.
ಕಾನೂನುಬಾಹಿರವಾಗಿ ನವಲಗುಂದ ಗುಡ್ಡದ ಮಣ್ಣನ್ನು ಬಳಸಿಕೊಂಡಿದ್ದು, ಹಾಗೂ ಯಾವದೇ ನಿಯಮ ಪಾಲನೆ ಮಾಡದೇ, ಬಿಲ್ ತೆಗೆದಿದ್ದರ ಹಿಂದೆ ಜನಪ್ರತಿನಿಧಿಯೊಬ್ಬರು ಒತ್ತಡ ಹಾಕಿದ್ದರೆಂದು ಅಧಿಕಾರಿಗಳು ಬಾಯಿಬಿಟ್ಟಿದ್ದಾರೆ.
ನೌಕರಿಗೆ ಎಲ್ಲಿ ತೊಂದರೆಯಾಗುತ್ತದೋ ಎಂದು ಜನಪ್ರತಿನಿಧಿ ಹೇಳಿದಂತೆ ಕೇಳಿರುವ ಅಧಿಕಾರಿಗಳು, ನಡೆದ ಎಲ್ಲ ಘಟನೆಯನ್ನು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪರ ಎದುರು ಹೇಳಿ ಬಂದಿದ್ದೇವೆ ಎಂದು ಅಧಿಕಾರಿಗಳು ತಮ್ಮ ಅಪ್ತ ವಲಯದಲ್ಲಿ ಚರ್ಚಿಸಿದ್ದಾರೆ ಎನ್ನಲಾಗಿದೆ. ಕಳೆದ ವಾರ ಹುಬ್ಬಳ್ಳಿಯಲ್ಲಿ ಶಂಕರ ಪಾಟೀಲ ಮುನೇನಕೊಪ್ಪರನ್ನು ಸುಜಾತಾ ಕಾಳೆ ಹಾಗೂ ಪ್ರತಿಭಾ ಎಂಬುವವರು ಭೇಟಿ ಮಾಡಿ, ವಸ್ತುಸ್ಥಿತಿಯನ್ನು ಹೇಳಿ ಬಂದಿದ್ದಾರೆ.
ಇದರಲ್ಲಿ ತಮ್ಮದೇನು ತಪ್ಪಿಲ್ಲ ಎಂದಿರುವ ಅಧಿಕಾರಿಗಳು, ನಮ್ಮಿಂದ ಆಡಳಿತಾತ್ಮಕ ತಪ್ಪು ಆಗಿದೆ, ಇನ್ಮೇಲೆ ಅಂತಹದಕ್ಕೆ ಅವಕಾಶ ಕೊಡಲ್ಲ, ಕಾನೂನು ಬಾಹಿರವಾಗಿ ಬಿಲ್ ತೆಗೆಯಲ್ಲ ಎಂದು ಹೇಳಿ ಬಂದಿದ್ದಾರೆ. ಈ ವರೆಗೆ ಅಧಿಕಾರಿಗಳು ನಮ್ಮ ಹೊಲ ನಮ್ಮ ರಸ್ತೆಗೆ ಯಾವದೇ ನಿಯಮ ಪಾಲನೆ ಮಾಡದೆ, ಒಟ್ಟು 30 ಕೋಟಿಯಷ್ಟು ಬಿಲ್ ತೆಗೆದಿದ್ದಾರೆ. ಅದರಲ್ಲಿ ಜಿ ಬಿ ಮೇಟಿ ಎಂಬ ಹೆಸರಲ್ಲಿ 24 ಕೋಟಿಗೂ ಹೆಚ್ಚು ಹಣ ತೆಗೆದಿರುವದನ್ನು ಅಧಿಕಾರಿಗಳು ಖಚಿತಪಡಿಸಿದ್ದಾರೆ.
