ನವಲಗುಂದ ವಿಧಾನಸಭಾ ಕ್ಷೇತ್ರದ ಅಣ್ಣಿಗೇರಿ ತಾಲೂಕಿನ ವ್ಯಾಪ್ತಿಯಲ್ಲಿ ರೈತರ ಮುಖದಲ್ಲಿ ಹರ್ಷ ಕಾಣಿಸಿಕೊಂಡಿದೆ. ಶಾಸಕ ಎನ್ ಎಚ್ ಕೋನರೆಡ್ಡಿಯವರ ಕನಸು ಸಾಕಾರಗೊಂಡಿದ್ದು, ಹೊಲಕ್ಕೆ ಹೋಗುವ ವಿಶಾಲ ರಸ್ತೆಗಳು ನಿರ್ಮಾಣಗೊಂಡಿವೆ.
ಅಣ್ಣಿಗೇರಿ ಭಾಗದಲ್ಲಿ ಹೊಲದ ರಸ್ತೆ ನಿರ್ಮಾಣವಾದ ಬಳಿಕ ಅಣ್ಣಿಗೇರಿ ಭಾಗದ ಹೊಲಗಳ ಲಾವಣಿ ದರ ಏರಿಕೆಯಾಗಿದೆ ಎನ್ನಲಾಗಿದ್ದು, ಹೊಲಗಳಿಗೆ ಡಿಮ್ಯಾಂಡ್ ಬಂದಿದೆ ಎಂದು ರೈತರು ಮಾತನಾಡಿಕೊಳ್ಳುತ್ತಿದ್ದಾರೆ. ಹೊಲಕ್ಕೆ ಹೋಗಲು ಸರಿಯಾದ ದಾರಿ ಇಲ್ಲದ್ದರಿಂದ ಪಾಳು ಬೀಳುತ್ತಿದ್ದ ಹೊಲಗಳನ್ನು ಉಳುಮೆ ಮಾಡಲು ಜನ ಮುಂದೆ ಬರುತ್ತಿದ್ದಾರೆ ಎನ್ನಲಾಗಿದೆ. ಲಾವಣಿ ದರ ದುಪ್ಪಟ್ಟು ಹೆಚ್ಚಾಗಿದೆ ಎನ್ನಲಾಗಿದೆ.
ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ನಿರ್ಮಾಣ ಮಾಡಲಾದ ನಮ್ಮ ಹೊಲ ನಮ್ಮ ರಸ್ತೆಯ ಕಾಮಗಾರಿ ಬಗ್ಗೆ ಕೇಳಿಬಂದ ದೂರಿನ ಹಿನ್ನೆಲೆಯಲ್ಲಿ ಲ್ಯಾಂಡ್ ಆರ್ಮಿ ಅಧಿಕಾರಿಗಳು ರಾತ್ರಿ ಹಗಲು ಕುಳಿತು ಲೆಕ್ಕಪತ್ರ ಹೊಂದಿಸಿ ಧಾಖಲೆಯನ್ನು ಸರಿ ಮಾಡಿದ್ದಾರೆ.
ನವಲಗುಂದ ಹಾಗೂ ಅಣ್ಣಿಗೇರಿ ತಾಲೂಕಿನಲ್ಲಿ ಶಾಸಕ ಎನ್ ಎಚ್ ಕೋನರೆಡ್ಡಿಯವರು, ಹೊಲದ ರಸ್ತೆ ನಿರ್ಮಾಣ ಮಾಡಿದ್ದಾರೆ. ಲ್ಯಾಂಡ್ ಆರ್ಮಿ ಅಧಿಕಾರಿಗಳು ಸಹ ಹೊಲದ ರಸ್ತೆ ನಿರ್ಮಾಣಕ್ಕೆ ತಗುಲಿದ ಸುಮಾರು 30 ಕೋಟಿಯಷ್ಟು ಹಣವನ್ನು ಗುತ್ತಿಗೆದಾರರಿಗೆ ಈಗಾಗಲೇ ಪಾವತಿ ಮಾಡಿದ್ದಾರೆ.
ಈ ಕಾಮಗಾರಿ ಕಾನೂನುಬಾಹಿರ ಎಂದು ಆರೋಪ ಮಾಡಿದ್ದ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಕಾನೂನು ಕ್ರಮದ ಎಚ್ಚರಿಕೆ ಕೊಟ್ಟ ಬೆನ್ನಲ್ಲೇ ಅಧಿಕಾರಿಗಳು ಲೆಕ್ಕಪತ್ರ ಸರಿ ಮಾಡಿಕೊಂಡಿದ್ದಾರೆ.
ಲ್ಯಾಂಡ್ ಆರ್ಮಿ ಅಧಿಕಾರಿಗಳು, ಹಗಲು ರಾತ್ರಿ ಕುಳಿತು ಕ್ವಾಲಿಟಿ, ಕ್ವಾಂಟಿಟಿ, ಮೇಸರಮೆಂಟ್ ತಾಳೆ ಹಾಕಿ ಧಾಖಲೆ ಸರಿಪಡಿಸಿದ್ದಾರೆ ಎನ್ನಲಾಗಿದೆ. ಇಂಜಿನೀಯರ್ ಅನ್ನಪೂರ್ಣ, ಸುಜಾತಾ ಕಾಳೆ ಅವರು, ಪ್ರಮುಖ ಗುತ್ತಿಗೆದಾರರನ್ನು ಎದುರು ಕೂರಿಸಿಕೊಂಡು, ಆ ಗುತ್ತಿಗೆದಾರರ ಮಾರ್ಗದರ್ಶನ ಪಡೆದು ಎಲ್ಲವನ್ನು ಸರಿ ಮಾಡಿದ್ದಾರೆ ಎನ್ನಲಾಗಿದೆ.