ಬೀದರನಲ್ಲಿ ಸೀನಿಮಿಯ ರೀತಿಯಲ್ಲಿ ದರೋಡೆ ನಡೆದಿದೆ. ಬೀದರನ ಜಿಲ್ಲಾ ನ್ಯಾಯಾಲಯದ ಆವರಣದ ಹಿಂಭಾಗದಲ್ಲಿರುವ ಬ್ಯಾಂಕ್ ಶಾಖೆಯ ಹೊರಗೆ ದರೋಡೆಕೋರರು ATM ಗೆ ಹಣ ಹಾಕಲು ಬಂದಿದ್ದ ಸಿಬ್ಬಂದಿ ಮೇಲೆ ಗುಂಡು ಹಾರಿಸಿ, ಹಣ ಕದ್ದೋಯ್ದಿದ್ದಾರೆ.
ವ್ಯಾನ್‌ನಿಂದ ಎಟಿಎಂಗೆ ನಗದು ತುಂಬುತ್ತಿದ್ದಾಗ ದರೋಡೆ ಯತ್ನ ನಡೆದಿದೆ. ಬೆಳಗ್ಗೆ 10.30ರ ಸುಮಾರಿಗೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಹಣದ ಪೆಟ್ಟಿಗೆಯನ್ನು ದೋಚಿದ್ದಾರೆ.
ವ್ಯಾನ್‌ನಲ್ಲಿದ್ದ ಇಬ್ಬರ ಮೇಲೆ ಮೊದಲು ಮೆಣಸಿನ ಪುಡಿ ಎರಚಿದ ನಂತರ ಅವರ ಮೇಲೆ ಗುಂಡು ಹಾರಿಸಿದ್ದಾರೆ. ನಂತರ ದುಷ್ಕರ್ಮಿಗಳು ನಗದು ಸಮೇತ ಪರಾರಿಯಾಗಿದ್ದಾರೆ.
ಈ ಘಟನೆಯಲ್ಲಿ ವ್ಯಾನ್ ಜೊತೆಗಿದ್ದ ಇಬ್ಬರು ಉದ್ಯೋಗಿಗಳ ಮೇಲೆ ಗುಂಡು ಹಾರಿಸಲಾಗಿದ್ದು, ಓರ್ವನನ್ನು ಹತ್ಯೆ ಮಾಡಲಾಗಿದೆ. ಮತ್ತೊಬ್ಬನ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದ್ದು, ಬದುಕುಳಿಯುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ಬೀದರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ. ಎಲ್ಲೆಡೆ ನಾಕಾಬಂದಿ ಹಾಕಲಾಗಿದೆ.