ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಒಂದು ವಾರದಿಂದ ಗುದ್ದಲಿ ಗದ್ದಲ ಏರ್ಪಟ್ಟಿದೆ.
ಗುದ್ದಲಿ ಪೂಜೆ, ಬಿಜೆಪಿ ಹಾಗೂ ಕಾಂಗ್ರೇಸ್ ನಾಯಕರ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ.
ಧಾರವಾಡ ತಾಲೂಕಿನಲ್ಲಿ ಭರ ದಿಂದ ಕಾಮಗಾರಿಗಳಿಗೆ ಚಾಲನೆ ಸಿಕ್ಕಿದ್ದು, ಗುದ್ದಲಿ ಪೂಜೆ ಗದ್ದಲಕ್ಕೆ ಕೆಡವಿದೆ. ಸಂಸದರ ಅನುದಾನ ಹಾಗೂ ಶಾಸಕರ ಅನುದಾನದ ಬಗ್ಗೆ ಕ್ಷೇತ್ರದಲ್ಲಿ ಚರ್ಚೆಗಳು ಆರಂಭವಾಗಿವೆ.
ಹಾಲಿ ಶಾಸಕ ವಿನಯ ಕುಲಕರ್ಣಿಯವರ ಗೈರು ಹಾಜರಿಯಲ್ಲಿ ಅವರ ಧರ್ಮಪತ್ನಿ ಶಿವಲೀಲಾ ಕುಲಕರ್ಣಿಯವರು ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡುತ್ತಿದ್ದಾರೆಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ಇದಕ್ಕೆ ಕೌಂಟರ್ ಕೊಟ್ಟಿರುವ ಕಾಂಗ್ರೇಸ್ ನಾಯಕರು, ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಅಮೃತ ದೇಸಾಯಿ ಹಾಗೂ ಸೀಮಾ ಮಸೂತಿಯವರು ಶಾಸಕರಾಗಿದ್ದಾಗ, ಅವರ ಕುಟುಂಬದವರು ಗುದ್ದಲಿ ಪೂಜೆ ಮಾಡಿದ್ದಾರೆ ಇದಕ್ಕೆ ನಾನೇ ಸಾಕ್ಷಿ ಎಂದು ಈಶ್ವರ ಶಿವಳ್ಳಿ ಹೇಳಿದ್ದಾರೆ.
ಬಿಜೆಪಿ ಪರವಾಗಿ ಶಂಕರ ಕುಮಾರದೇಸಾಯಿ ಹಾಗೂ ಶಂಕರ ಸೆಳಕೆ, ಕಾಂಗ್ರೇಸ್ ಪರವಾಗಿ ಅರವಿಂದ ಏಗನಗೌಡರ ಹಾಗೂ ಈಶ್ವರ ಶಿವಳ್ಳಿ ಪರಸ್ಪರರ ಏಟಿಗೆ ಎದುರೇಟು ನೀಡುತ್ತಿದ್ದಾರೆ.
ಕಾಮಗಾರಿಗಳು ನಡೆಯಲಿ ಅನ್ನೋ ಕಾರಣಕ್ಕೆ, ಗ್ರಾಮ ಪಂಚಾಯತಿಯವರು, ಶಾಸಕ ವಿನಯ ಕುಲಕರ್ಣಿಯವರ ಅನುಪಸ್ಥಿತಿಯಲ್ಲಿ ಅವರ ಧರ್ಮಪತ್ನಿಯವರಿಂದ ಗುದ್ದಲಿ ಪೂಜೆ ಮಾಡಿಸಿದರೆ ಏನಾಯ್ತು, ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಬೇಡ ಅಂತಿದ್ದಾರೆ ಗ್ರಾಮಸ್ಥರು.
ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ರಾಜಕೀಯ ಗರಿಗೆದರಿದ್ದು, ಗುದ್ದಲಿ ಪೂಜೆ ವಿಚಾರ ಗದ್ದಲ ಎಬ್ಬಿಸಿದೆ.
