ಲೋಪ ದೋಷ ಕಂಡು ಹಿಡಿಯದೆ ಏಕಾಏಕಿಯಾಗಿ ಎನ್ ಇ ಪಿ ರದ್ದುಗೊಳಿಸುವ ತೀರ್ಮಾನ ಪ್ರಕಟಿಸಿರುವ ರಾಜ್ಯ ಕಾಂಗ್ರೇಸ್ ಸರ್ಕಾರದ ವಿರುದ್ದ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಮಾಜಿ ಶಿಕ್ಷಣ ಸಚಿವ ಬಿ ಸಿ ನಾಗೇಶ, ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಮಾಫಿಯಾಕ್ಕೆ ಶರಣಾಗಿದೆ ಎಂದು ಆರೋಪಿಸಿದರು. ಬಿಜೆಪಿ ರಾಜ್ಯ ಸರಕಾರಗಳು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ವಿಚಾರದಲ್ಲಿ ಯಾವತ್ತೂ ರಾಜಕೀಯ ಮಾಡಿರಲಿಲ್ಲ ಎಂದ ಅವರು ಈ ಹಿಂದೆ ಮನಮೋಹನಸಿಂಗ ನೇತೃತ್ವದ ಸರ್ಕಾರ ಇದ್ದಾಗ ಜಾರಿ ಮಾಡಿದ್ದ ಶಿಕ್ಷಣ ನೀತಿಯನ್ನು ಅಂದಿನ ಯಡಿಯೂರಪ್ಪ ನೇತೃತ್ವದ ಸರ್ಕಾರ ಎಥಾವತ್ತಾಗಿ ಜಾರಿಗೆ ತರಲು ಮುಂದಾಗಿತ್ತು ಎಂದರು. ಪ್ರಸ್ತುತ ರಾಜ್ಯ ಕಾಂಗ್ರೇಸ್ ಸರ್ಕಾರದಲ್ಲಿ ಶಿಕ್ಷಣ ಸಚಿವರು ಮಧು ಬಂಗಾರಪ್ಪನವರೋ ಅಥವಾ ಡಿ ಕೆ ಶಿವಕುಮಾರ ಅವರೋ, ಅನ್ನೋದೆ ಗೊತ್ತಾಗುತ್ತಿಲ್ಲ ಎಂದು ನಾಗೇಶ ತಿಳಿಸಿದರು. ಯಾರ ಅಭಿಪ್ರಾಯ ಪಡೆಯದೇ ಏಕಾಏಕಿ ನಿರ್ಧಾರ ವಿಧ್ಯಾರ್ಥಿಗಳ ಭವಿಷ್ಯದ ಮೇಲೆ ಬರೆ ನೀಡಲಿದೆ ಎಂದು ನಾಗೇಶ ಆರೋಪಿಸಿದರು
