ಬಿಜೆಪಿ ಟಿಕೇಟ್ ಕೊಡಿಸುವದಾಗಿ ಹೇಳಿ ವಂಚಿಸಿ, ಸಿ ಸಿ ಬಿ ಪೊಲೀಸರ ಕೈಗೆ ಸಿಕ್ಕು ಬಿದ್ದಿರುವ ಚೈತ್ರಾ ಕುಂದಾಪುರ ಗ್ಯಾಂಗಿನ ಹಾಲಶ್ರೀ ವಿರುದ್ಧ ಮತ್ತೊಂದು ವಂಚನೆ ಪ್ರಕರಣ ಕೇಳಿ ಬಂದಿದೆ. ಶಿರಹಟ್ಟಿ ಮೀಸಲು ಕ್ಷೇತ್ರದಿಂದ ಬಿಜೆಪಿ ಟಿಕೇಟ್ ಆಕಾಂಕ್ಷಿಯಾಗಿದ್ದ ಸಂಜಯ ಚವಡಾಳ ಎಂಬುವವರು, ಹಾಲಶ್ರೀಯವರು, ಬಿಜೆಪಿ ಟಿಕೇಟ್ ಕೊಡಿಸುವದಾಗಿ ಹೇಳಿ ನನಗೆ ಒಂದು ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ಮುಂಡರಗಿ ಠಾಣೆಯಲ್ಲಿ ದೂರು ಧಾಖಲಿಸಿದ್ದಾರೆ.
ಶಿರಹಟ್ಟಿ ತಾಲೂಕಿನ ರಣತೂರು ಗ್ರಾಮ ಪಂಚಾಯತಿಯ ಪಿ ಡಿ ಓ ಆಗಿದ್ದ ಸಂಜಯ ಕರ್ತವ್ಯ ನಿರ್ಲಕ್ಷದ ಆರೋಪದ ಮೇಲೆ ಅಮಾನತ್ತುಗೊಂಡಿದ್ದರು. ಬಿಜೆಪಿ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಸಂಜಯ ಆರ್ ಎಸ್ ಎಸ್ ಬೈಠಕ್ ನಲ್ಲಿಯೂ ಕಾಣಿಸಿಕೊಂಡಿದ್ದರು. ಮೂರು ಹಂತಗಳಲ್ಲಿ ನನ್ನಿಂದ ಒಂದು ಕೋಟಿ ಪಡೆದು ಹಾಲಶ್ರೀ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ದೂರು ಧಾಖಲಿಸಿಕೊಂಡಿರುವ ಮುಂಡರಗಿ ಠಾಣೆ ಪೊಲೀಸರು ಹಣ ಕೊಟ್ಟಿದ್ದರ ಬಗ್ಗೆ ಧಾಖಲೆ ಸಲ್ಲಿಸುವಂತೆ ಹೇಳಿದ್ದು, ಇನ್ನೂವರೆಗೆ ಸಂಜಯ, ಧಾಖಲೆ ಕೊಟ್ಟಿಲ್ಲ ಎನ್ನಲಾಗಿದೆ.
ಚೈತ್ರಾ ಬಂದನವಾದ ಬಳಿಕ ತಲೆಮರೆಸಿಕೊಂಡಿದ್ದ ಹಾಲಶ್ರೀ ಜೊತೆ ಸಂಜಯ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಹಾಲಶ್ರೀ ಮೊಬೈಲ್ ನಲ್ಲಿ ಸಂಜಯ ಚವಡಾಳ ನಂಬರ ಇದ್ದ ಕಾರಣ, ಸಿ ಸಿ ಬಿ ಪೊಲೀಸರು ಸಂಜಯನನ್ನು ವಿಚಾರಣೆಗೆ ಕರೆಸಿಕೊಂಡಿದ್ದರು ಎನ್ನಲಾಗಿದೆ. ಚೈತ್ರಾ ಕುಂದಾಪುರ ಗ್ಯಾಂಗಿನ ವಂಚನೆಗಳು ಬಗೆದಷ್ಟು ಹೊರ ಬೀಳುತ್ತಿದ್ದು, ಕುತೂಹಲ ಮೂಡಿಸಿದೆ.