ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ತೋಪನಕಟ್ಟಿ ಗ್ರಾಮ ಉದ್ವಿಗ್ನಗೊಂಡಿದೆ. ಹಿಂದೂ ಸ್ಮಶಾನದಲ್ಲಿ ದಲಿತ ಯುವಕ ಕುಳಿತುಕೊಂಡಿದ್ದನ್ನು ಪ್ರಶ್ನಿಸಿ, ಸವರ್ಣಿಯರ ಗುಂಪೂಂದು ದಲಿತ ಯುವಕನನ್ನು ಎಳೆದಾಡಿದೆ ಎನ್ನಲಾಗಿದೆ. ಈ ಘಟನೆಯನ್ನು ಖಂಡಿಸಿ ಭೀಮ್ ಆರ್ಮಿ ಸದಸ್ಯರು ಇಂದು ತೋಪನಕಟ್ಟಿ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಸುಮಾರು ಎರಡು ಸಾವಿರಕ್ಕೂ ಹೆಚ್ಚಿದ್ದ ಭೀಮ ಆರ್ಮಿಯ ಸದಸ್ಯರು, ಪ್ರತಿಭಟನಾ ಮೆರವಣಿಗೆ ಮಾಡುವ ಸಂದರ್ಭದಲ್ಲಿ ಜೈ ಶ್ರೀರಾಮ ಎಂಬ ಘೋಷಣೆ ಕೂಗುತ್ತಾ ಬಂದ ಒಂದು ಗುಂಪು ಕಲ್ಲು ಎಸೆಯುತ್ತ ಬಂತು ಎನ್ನಲಾಗಿದೆ.
ಇದರಿಂದ ಉದ್ರಿಕ್ತಗೊಂಡ ಭೀಮ ಆರ್ಮಿಯ ಸದಸ್ಯರು, ಸವರ್ಣಿಯರತ್ತ ಹೊರಟಾಗ ಪೊಲೀಸ್ ಸಿಬ್ಬಂದಿ ತಡೆದಿದ್ದಾರೆ. ಪರಿಸ್ಥಿತಿ ಸಧ್ಯ ಶಾಂತಿಯುತವಾಗಿದ್ದರು, ಬೂದಿ ಮುಚ್ಚಿದ ಕೆಂಡದಂತಿದೆ. ಖಾನಾಪುರದ ಬಿಜೆಪಿ ಶಾಸಕರ ಬೆಂಬಲಿಗರು ದಲಿತರ ಮೇಲೆ ಮೇಲಿಂದ ಮೇಲೆ ಹಲ್ಲೆ ಮಾಡುತ್ತಿದ್ದಾರೆ ಎಂದು ಭೀಮ ಆರ್ಮಿ ಆರೋಪಿಸಿದ್ದು, ಗ್ರಾಮದ ದಲಿತರಿಗೆ ರಕ್ಷಣೆಗೆ ಕೊಡಬೇಕೆಂದು ಆಗ್ರಹಿಸಿದೆ. ತೋಪನಕಟ್ಟಿ ಗ್ರಾಮ ಖಾನಾಪುರ ಶಾಸಕ ವಿಠ್ಠಲ್ ಹಲಗೆಕರ ಅವರ ಸ್ವಗ್ರಾಮವಾಗಿದ್ದು, ಶಾಸಕರು ಎರಡು ಸಮುದಾಯದ ನಡುವಿನ ಜಗಳ ಬಗೆಹರಿಸುವದನ್ನು ಬಿಟ್ಟು ರಾಜಕೀಯ ಮಾಡುತ್ತಿದ್ದಾರೆ ಎಂದು ಭೀಮ ಆರ್ಮಿ ಆರೋಪಿಸಿದೆ.