ಕಳೆದ ವರ್ಷ ವಿಜಯಪುರ ಮಹಾ ನಗರಪಾಲಿಕೆಗೆ ನಡೆದ ಚುನಾವಣೆ ರಾಜ್ಯದಲ್ಲಿ ಗಮನ ಸೆಳೆದಿತ್ತು. ಬಿಜೆಪಿ ಫೈರ್ ಬ್ರಾಂಡ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ತವರಿನಲ್ಲಿ ನಡೆದಿದ್ದ ಪಾಲಿಕೆ ಚುನಾವಣೆ ಎಲ್ಲರ ಗಮನ ಸೆಳೆದಿತ್ತು. ಜಿದ್ದಾಜಿದ್ದಿನಿಂದ ಕೂಡಿದ್ದ ಚುನಾವಣೆಯಲ್ಲಿ ಫಲಿತಾಂಶ ಅತಂತ್ರ ಸ್ಥಿತಿಗೆ ತಲುಪಿತ್ತು. ಬಿಜೆಪಿ ಅತೀ ಹೆಚ್ಚು ಸ್ಥಾನಗಳಿಸಿತ್ತು. ಒಟ್ಟು 35 ಸದಸ್ಯ ಬಲದ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯಿಂದ 17, ಕಾಂಗ್ರೆಸ್ಸಿನಿಂದ 10, ಪಕ್ಷೇತರರು 5, ಎಐಎಂಐಎಂ 2 ಮತ್ತು ಓರ್ವ ಜೆಡಿಎಸ್ ಸದಸ್ಯರು ಆಯ್ಕೆಯಾಗಿದ್ದರು.
ವಿಜಯಪುರ ಮಹಾನಗರ ಪಾಲಿಕೆಗೆ 2022ರ ಅಕ್ಟೋಬರ್ ತಿಂಗಳಲ್ಲಿ ಚುನಾವಣೆ ನಡೆದಿತ್ತು. ಆದರೆ, ಚುನಾವಣೆ ನಡೆದು ಇದೇ ಅಕ್ಟೋಬರ್ 30ಕ್ಕೆ ಒಂದು ವರ್ಷ ಪೂರ್ಣವಾಗುತ್ತಿದ್ದರೂ ಈವರೆಗೆ ಮೀಸಲಾತಿ ಗೊಂದಲದ ಹಿನ್ನೆಲೆಯಲ್ಲಿ ಮೇಯರ್ ಮತ್ತು ಉಪಮೇಯರ್ ಚುನಾವಣೆ ನನೆಗುದಿಗೆ ಬಿದ್ದಿತ್ತು. ವಿಜಯಪುರ ಪಾಲಿಕೆಯಲ್ಲಿ ಅಧಿಕಾರ ಹಿಡಿಯಬೇಕೆಂದು ಕಾದು ಕುಳಿತಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳರಿಗೆ ಸಚಿವ ಎಮ್ ಬಿ ಪಾಟೀಲ್ ಬಿಸಿ ಮುಟ್ಟಿಸಿದ್ದಾರೆ.
ಅಮೇರಿಕಾ ಪ್ರವಾಸ ಮುಗಿಸಿ ಬಂದ ತಕ್ಷಣ ನಡೆದ ಬೆಳವಣಿಗೆಯಲ್ಲಿ ಅನ್ಯ ಪಕ್ಷದ 8 ಜನ ಪಾಲಿಕೆ ಸದಸ್ಯರು ಎಮ್ ಬಿ ಪಾಟೀಲ್ ನೇತೃತ್ವದಲ್ಲಿ ಕಾಂಗ್ರೇಸ್ ಸೇರ್ಪಡೆಯಾಗಿದ್ದಾರೆ. ಇದರಿಂದಾಗಿ ಕಾಂಗ್ರೇಸ್ಸಿಗೆ ಪಾಲಿಕೆಯಲ್ಲಿ ಬಲ ಬಂದಿದ್ದು,
ಕಾಂಗ್ರೇಸ್ ಸೇರಿರುವ ಅನ್ಯ ಪಕ್ಷದ ಸದಸ್ಯರಿಂದಾಗಿ, ಈಗ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೇಸ್ಸಿನ ಬಲ 22 ಕ್ಕೆ ಏರಿಕೆಯಾಗಿದೆ. 18 ಜನ ಪಾಲಿಕೆ ಸದಸ್ಯರು, ಇಬ್ಬರು ಶಾಸಕರು ಹಾಗೂ ಇಬ್ಬರು ವಿಧಾನ ಪರಿಷತ ಸದಸ್ಯರು ಸೇರಿದಂತೆ ಒಟ್ಟು 22 ಸದಸ್ಯರಾದಂತಾಗಿದೆ.
ಇತ್ತ ಬಿಜೆಪಿಯಿಂದ 17 ಜನ ಕಾರ್ಪೋರೇಟರ್ ಗಳು, ಓರ್ವ ಸಂಸದ ಮತ್ತು ಒಬ್ಬರು ಶಾಸಕರ ಸೇರಿದಂತೆ ಕೇವಲ 18 ಸದಸ್ಯರನ್ನು ಹೊಂದಿದಂತಾಗಿದೆ.
ಕುತೂಹಲ ಮೂಡಿಸಿದ್ದ ವಿಜಯಪುರ ಪಾಲಿಕೆಯಲ್ಲಿ ಕಡೆಗೂ ಕಾಂಗ್ರೇಸ್ ಅಧಿಕಾರ ಹಿಡಿಯಲಿದೆ.