ಶಿಸ್ತಿನ ಪಕ್ಷ ಎಂದು ಹೆಸರಾದ ಭಾರತೀಯ ಜನತಾ ಪಕ್ಷದ ಅಂಗಳದಲ್ಲಿ ಒಂದು ವಾರದಿಂದ ಅಸಮಾಧಾನದ ಹೊಗೆಯಾಡುತ್ತಿದೆ. ಬಿ ವೈ ವಿಜಯೇಂದ್ರ ಪಕ್ಷದ ನೂತನ ಅಧ್ಯಕ್ಷರಾದ ಬಳಿಕ ಆಂತರಿಕ ಭಿನ್ನಮತ ಸ್ಪೋಟಿಸಿದೆ. ಭಿನ್ನಮತ ಶಮನ ಮಾಡುವ ನಿಟ್ಟಿನಲ್ಲಿ ಪಕ್ಷದ ನಾಯಕರು ನಡೆಸಿದ ಪ್ರಯತ್ನ ಕೈಕೊಟ್ಟಿದೆ. ಪಕ್ಷದೊಳಗಿನ ಕಲಹ ಕಿಡಿ ಹೊತ್ತಿಸಿದ್ದು, ಇದು ಆಡಳಿತಾರೋಡ ಕಾಂಗ್ರೇಸ್ ಸರ್ಕಾರಕ್ಕೆ ಅಸ್ತ್ರ ಸಿಕ್ಕಂತಾಗಿದೆ.
ವಿಪಕ್ಷ ನಾಯಕನ ಆಯ್ಕೆಯ ಹಿನ್ನೇಲೆಯಲ್ಲಿ ನಿನ್ನೇ ನಡೆದ ಶಾಸಕಾಂಗ ಸಭೆಯಲ್ಲಿ ಮನಸ್ತಾಪ ಉಂಟಾಗಿದೆ. ವಿಪಕ್ಷ ಸ್ಥಾನ ಉತ್ತರ ಕರ್ನಾಟಕಕ್ಕೆ ಬೇಕು ಎಂದು ಬಹಿರಂಗವಾಗಿಯೇ ಹೇಳಿದ್ದ ಬಸನಗೌಡ ಪಾಟೀಲ ಯತ್ನಾಳರ ಮಾತನ್ನು ಪಕ್ಷದ ವರಿಷ್ಠರು ಗಂಭೀರವಾಗಿ ಪರಿಗಣಿಸಿಲ್ಲ. ಇದಕ್ಕೆ ಪುಷ್ಟಿ ನೀಡುವಂತೆ ಮೊನ್ನೆಯಷ್ಟೇ ಮಾಜಿ ಸಚಿವ ಮುರುಗೇಶ್ ನಿರಾಣಿ, ಬಸನಗೌಡ ಪಾಟೀಲ ಯತ್ನಾಳ ಮಾತನ್ನು ಯಾರು ಗಂಭೀರವಾಗಿ ತಗೋಳಲ್ಲ ಎಂದು ಹೇಳಿಕೆ ನೀಡಿದ್ದರು.
ಇತ್ತ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನೇಮಕಗೊಂಡ ಬಿ ವೈ ವಿಜಯೇಂದ್ರ ಮತ್ತು ಅತ್ತ ಮುರುಗೇಶ್ ನಿರಾಣಿ ವಿರುದ್ಧ ಮಾತನಾಡುತ್ತಾ ಬಂದಿರುವ ಯತ್ನಾಳ ಅವರಿಗೆ ಕಡೆಗೂ ಬಿಜೆಪಿ ಹೈಕಮಾಂಡ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ನಡೆಸಿಕೊಂಡಿದೆ. ಹಾಗೆ ಗಮನಿಸಿದರೆ, ರಾಜ್ಯದಲ್ಲಿ ಹಿಂದು ಕಾರ್ಯಕರ್ತರ ಮೇಲೆ ಹಲ್ಲೆಯಂತಹ ಘಟನೆ ನಡೆದಾಗ ಬಸನಗೌಡ ಪಾಟೀಲ ಯತ್ನಾಳ ಕಾರ್ಯಕರ್ತರಿಗೆ ನೆರವಾಗಿದ್ದಾರೆ. ಪ್ರಭಲ ಪಂಚಮಸಾಲಿ ಸಮುದಾಯವನ್ನು ಪ್ರತಿನಿಧಿಸುವ ಬಸನಗೌಡ ಪಾಟೀಲ ಯತ್ನಾಳ, ಸಮುದಾಯದ ಕಾರ್ಯಕ್ರಮದಲ್ಲಿಯೂ ಬಿಜೆಪಿಯನ್ನು ಬಿಟ್ಟುಕೊಟ್ಟ ಉಧಾಹರಣೆಗಳಿಲ್ಲ. ಅಂತಹ ಯತ್ನಾಳ ಅವರಿಗೆ ಈ ರೀತಿಯ ಪರಿಸ್ಥಿತಿ ಬರುತ್ತದೆ ಎಂದು ಯಾರು ಊಹಿಸಿರಲಿಲ್ಲ.
ತಪ್ಪಿದ ವಿಪಕ್ಷ ಸ್ಥಾನ, ಭುಗಿಲೆದ್ದ ಅಸಮಾಧಾನ
ಸಮರವೋ, ಸಮಾರಾಧನೆಯೋ
ಹಿಂದುತ್ವದ ಪರ ನಿಂತು, ಸರ್ಕಾರದ ವಿರುದ್ಧ ಪ್ರತಿನಿತ್ಯ ಚಾಟಿ ಬೀಸುತ್ತಿದ್ದ ಬಸನಗೌಡ ಪಾಟೀಲ ಯತ್ನಾಳ, ಪಕ್ಷದ ವರಿಷ್ಟರು ಉತ್ತಮ ಅವಕಾಶ ಒದಗಿಸಿಕೊಡುತ್ತಾರೆ ಎಂದು ಭಾವಿಸಿದ್ದರು. ಆದರೆ ಯಾವಾಗ ವಿಪಕ್ಷ ಸ್ಥಾನ ಸಿಗಲ್ಲ ಅನ್ನೋದು ಗೊತ್ತಾಯ್ತೋ ಬಸನಗೌಡ ಪಾಟೀಲ ಯತ್ನಾಳ್, ಸಭೆಯಿಂದ ಹೊರಬಂದರು. ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ನಡೆಯುವ ಮುನ್ನ ಸಭೆಯಿಂದ ಹೊರ ಬಂದ ಬಸನಗೌಡ ಪಾಟೀಲ ಯತ್ನಾಳ ಆಕ್ರೋಶ ಹೊರಹಾಕಿದ್ದರು. ಪಕ್ಷದೊಳಗೆ, ಗಟ್ಟಿಯಾಗಿ ಗುಟುರು ಹಾಕುತ್ತಿದ್ದ ಯತ್ನಾಳ್ ಬಕೆಟ್ ಮತ್ತು ಅಡ್ಜಸ್ಟ್ಮೆಂಟ್ ರಾಜಕಾರಣ ಮಾಡಲ್ಲ ಎನ್ನುತ್ತಾ ಸಮರ ಸಾರಿದ್ದು, ಈ ಸಮರ ಸಮರವೋ ಅಥವಾ ಸಮಾರಾಧನೆಯೋ…….! ಕಾಲವೇ ಹೇಳಬೇಕು
