ಸಾಂಸ್ಕೃತಿಕ ನಗರಿ ಧಾರವಾಡದಲ್ಲಿಂದು ಸಂಕ್ರಾಂತಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಸಮೃದ್ಧಿಯ ಸಂಕೇತವಾಗಿರುವ ಸಂಕ್ರಾಂತಿಯನ್ನು ಜಾನಪದ ಗೀತೆ ಹಾಡುವದರೊಂದಿಗೆ ಹೇಮಾಕ್ಷಿ ಕಿರೆಸೂರು ನೇತೃತ್ವದಲ್ಲಿ ಮಹಿಳೆಯರು ವಿಶಿಷ್ಟವಾಗಿ ಆಚರಿಸಿದರು.
ಬಗೆ ಬಗೆಯ ಅಡುಗೆ ತಯಾರಿ ಮಾಡಿಕೊಂಡು ಬಂದಿದ್ದ ಮಹಿಳೆಯರು, ಪೂಜೆ ಸಲ್ಲಿಸಿ ಒಟ್ಟಿಗೆ ಊಟ ಮಾಡಿದರು. ಮಕರ ಸಂಕ್ರಾಂತಿಯ ಹಬ್ಬದ ಉತ್ಸವಕ್ಕೆ ಮೆರಗು ತಂದುಕೊಟ್ಟರು.
ಸಂಕ್ರಾಂತಿ ಸಂದರ್ಭದಲ್ಲಿ “ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ” ಎಂಬುದು ಪ್ರಚಲಿತದಲ್ಲಿರುವ ಕನ್ನಡದ ಮಾತಾಗಿದೆ. ಇದರರ್ಥ ಒಬ್ಬರು ಎಳ್ಳು ಮತ್ತು ಬೆಲ್ಲದ ಮಿಶ್ರಣವನ್ನು ತಿನ್ನಬೇಕು ಮತ್ತು ಒಳ್ಳೆಯ ಮಾತುಗಳನ್ನು ಹೇಳಬೇಕು. ಈ ಮಾತು ‘ಎಳ್ಳು ಬೀರೋದು’ ಎಂಬ ಬಹಳ ಮುಖ್ಯವಾದ ಸಂಪ್ರದಾಯವನ್ನು ಅನುಸರಿಸುತ್ತದೆ. ಮಹಿಳೆಯರು ಮತ್ತು ಮಕ್ಕಳು ಮನೆ-ಮನೆಗೆ ತೆರಳಿ ಕಬ್ಬಿನ ತುಂಡು, ಎಳ್ಳು ಮತ್ತು ಬೆಲ್ಲದ ಮಿಶ್ರಣ ಮತ್ತು ಸಕ್ಕರೆ ಅಚ್ಚನ್ನು ಒಳಗೊಂಡಿರುವ ತಟ್ಟೆಗಳನ್ನು ಬದಲಿಸಿಕೊಳ್ಳುತ್ತಾರೆ.
ಈ ಸಂಪ್ರದಾಯವು ಸಂತೋಷವನ್ನು ಹಂಚಿಕೊಳ್ಳುವ ಮತ್ತು ಹರಡುವ ಗುಣಗಳನ್ನು ಸಂಕೇತಿಸುತ್ತದೆ. ಒಟ್ಟಿನಲ್ಲಿ ಧಾರವಾಡದ ಮಹಿಳೆಯರು ಆಚರಿಸಿದ ಸಂಕ್ರಾಂತಿ, ಸಾಮರಸ್ಯ, ಪ್ರೀತಿ ಹಂಚಿತು. ಈ ಸಂದರ್ಭದಲ್ಲಿ ಹೇಮಾಕ್ಷಿ ಕಿರೆಸೂರು, ಲತಾ ಮಂಟಾ, ಸುನೀತಾ ದಾಮೋದರ, ಅನನ್ಯಾ, ಕವಿತಾ, ವೀಣಾ, ಪ್ರಿಯಾಂಕಾ, ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.