ಧಾರವಾಡದ ನವಿಲುಗರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದ ಪ್ರತಿಭಾ ಪಾಟೀಲರ ಎರಡು ಕವನ ಸಂಕಲನಗಳ ಬಿಡುಗಡೆ ಹಾಗೂ ವೇದಿಕೆಯ 5ನೇ ವರ್ಷದ ವಾರ್ಷಿಕೋತ್ಸವ ಹಾಗೂ ಕವಿಗೋಷ್ಠಿ ಕಾರ್ಯಕ್ರಮ ಜೂನ್ 2ರಂದು ನಗರದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಆಯೋಜಿಸಲಾಗಿದೆ.
ಜೂನ್ 2ರಂದು ಬೆಳಗ್ಗೆ 10 ಗಂಟೆಗೆ ಹಿರಿಯ ಸಾಹಿತಿ ಸವಿತಾ ನಾಗಭೂಷಣ ಇಡೀ ದಿನದ ಕಾರ್ಯಕ್ರಮಗಳನ್ನು ಉದ್ಘಾಟಿಸುವರು. ಬಳಿಕ ನವಿಲುಗರಿ ವೇದಿಕೆ ಅಧ್ಯಕ್ಷರಾದ ಪ್ರತಿಭಾ ಪಾಟೀಲರ “ಕನಸು ದೊರೆತ ಮಳಿಗೆ” ಮತ್ತು “ಸಿಂಬಿ” ಎಂಬ ಅವಳಿ ಕವನ ಸಂಕಲನ ಕೃತಿಗಳು ಲೋಕಾರ್ಪಣೆಗೊಳ್ಳಲಿವೆ. ಆಕಾಶವಾಣಿ ಧಾರವಾಡ ಕೇಂದ್ರದ ಮುಖ್ಯಸ್ಥ ಡಾ. ಬಸು ಬೇವಿನಗಿಡದ ಅಧ್ಯಕ್ಷತೆ ವಹಿಸುವರು. ಹಂಪಿ ಕನ್ನಡ ವಿವಿ ವಿಶ್ರಾಂತ ಕುಲಪತಿ ಡಾ. ಮಲ್ಲಿಕಾ ಘಂಟಿ ಆಶಯ ನುಡಿಗಳನ್ನಾಡುವರು.
“ಕನಸು ದೊರೆತ ಮಳಿಗೆ” ಕೃತಿಯನ್ನು ಡಾ. ರಾಜಶೇಖರ ಮಠಪತಿ (ರಾಗಂ), “ಸಿಂಬಿ” ಕೃತಿಯನ್ನು ಡಾ. ಪ್ರಜ್ಞಾ ಮತ್ತಿಹಳ್ಳಿ ಬಿಡುಗಡೆಗೊಳಿಸುವರು. ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶಂಕರ ಹಲಗತ್ತಿ, ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಮಾಜಿ ನಿರ್ದೆಶಕ ಶರಣಬಸವ ಅಂಗಡಿ, ಡಾ. ಕೆ.ಎಸ್. ಪಾಟೀಲ, ಸಿದ್ದನಗೌಡ ಪಾಟೀಲ, ಗುರುನಾಥ ಕುಸುಗಲ್ಲ, ಪ್ರತಿಭಾ ಪಾಟೀಲ ಪಾಲ್ಗೊಳ್ಳುವರು. ಇದೇ ಸಮಾರಂಭದಲ್ಲಿ ಪ್ರತಿಭಾ ಪಾಟೀಲರ ತಂದೆ-ತಾಯಿಗಳಾದ ಗುರುನಾಥ ಕುಸುಗಲ್ಲ ಮತ್ತು ಕಮಲವ್ವ ಕುಸುಗಲ್ಲರ ೫೦ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮಾಚರಣೆ ನಡೆಯಲಿದೆ.
ಬಳಿಕ ವಿವಿಧ ಕ್ಷೇತ್ರದ 11 ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮಧ್ಯಾಹ್ನ 2.30ಕ್ಕೆ ನಡೆಯುವ ಕವಿಗೋಷ್ಠಿಯನ್ನು ಡಾ. ನಿಂಗಪ್ಪ ಮುದೇನೂರ ಉದ್ಘಾಟಿಸುವರು. ಚನ್ನಪ್ಪ ಅಂಗಡಿ ಅಧ್ಯಕ್ಷತೆ ವಹಿಸುವರು. ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ, ಜಗದೀಶ ಘಾಣೇಕರ, ಶಾಲಿನಿ ರುದ್ರಮುನಿ, ಪಾಲ್ಗೊಳ್ಳುವರು. ರಾಜ್ಯದ ವಿವಿಧೆಡೆಯಿಂದ ಆಗಮಿಸುವ 22 ಕವಿಗಳು ಗೋಷ್ಠಿಯಲ್ಲಿ ಕವನ ವಾಚನ ಮಾಡುವರು. ಕವಿಗೋಷ್ಠಿ ಬಳಿಕ ಶ್ರೀ ಪದ್ಮ ಭಾಸ್ಕರ ನೃತ್ಯ ಕಲಾ ಕೇಂದ್ರದ ಮಕ್ಕಳಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.
